ಪ್ರಧಾನಿ ಮೋದಿ ಆಡಳಿತ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ: ಗುಂಡೂರಾವ್

– ಚೌಕಿದಾರ ಅಲ್ಲ ಜನರ ಪಾಲಿನ ಕೆಟ್ಟ ಗ್ರಹಚಾರ

ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ ಬಳಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್, ಪ್ರಧಾನಿ ಮೋದಿಯವರ ಆಡಳಿತ. ಇದೊಂದು ರೀತಿ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ ಎಂದು ವ್ಯಂಗ್ಯ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ದಿನೇಶ್ ಗುಂಡೂರಾವ್, ಚೇಳಿಗೆ ಯಜಮಾನಿಕೆ ನೀಡಿ ಮನೆಯವರೆಲ್ಲಾ ಕುಟುಕಿಸಿಕೊಳ್ಳುವಂತಾಗಿದೆ ಪ್ರಧಾನಿ ಮೋದಿಯವರ ಆಡಳಿತ. ಇದೊಂದು ರೀತಿ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ. ಸ್ವಘೋಷಿತ ‘ಚೌಕಿದಾರ’ ಮೋದಿಯವರು ನಿಜವಾದ ‘ಚೌಕಿದಾರ’ರಲ್ಲ. ಬದಲಿಗೆ ಜನಸಾಮಾನ್ಯರ ಪಾಲಿನ ‘ಕೆಟ್ಟ ಗ್ರಹಚಾರ’ವಾಗಿದ್ದಾರೆ. ಮೋದಿಯವರ ಅಚ್ಚೇದಿನ್‍ನ ಸತ್ಯ ಜನರಿಗೆ ಈಗ ಅರಿವಾಗುತ್ತಿದೆ. ಬೆಲೆಯೇರಿಸಿ ಜನರ ಜೇಬು ಖಾಲಿ ಮಾಡುವುದೇ ಕೇಂದ್ರ ಸರ್ಕಾರದ ಒಂದಂಶದ ಕಾರ್ಯಕ್ರಮವಿದ್ದಂತೆ ಭಾಸವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಒಂದೇ ತಿಂಗಳ ಅವಧಿಯಲ್ಲಿ 4 ಬಾರಿ ಎಲ್‍ಪಿಜಿ ಬೆಲೆಯೇರಿಕೆಯಾಗಿದೆ. ಒಂದೊಂದು ರೂಪಾಯಿಗೂ ಪರಿತಪಿಸುತ್ತಿರುವ ಬಡಜನತೆ ಈ ಬೆಲೆಯೇರಿಕೆ ತಾಪ ಸಹಿಸಿಕೊಳ್ಳಲು ಹೇಗೆ ಸಾಧ್ಯ? ಈ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತಾದರೂ ಸಂವೇದನೆ ಬೇಡವೆ ಎಂದು ಪ್ರಶ್ನಿಸಿದ್ದಾರೆ.

ಹೊಟ್ಟೆ-ಬಟ್ಟೆ ಕಟ್ಟಿ ಜೀವನ ನಡೆಸುತ್ತಿರುವ ಜನ ಈ ಸರ್ಕಾರದ ದುಡ್ಡಿನ ದುರಾಸೆಗೆ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಬೆಲೆಯೇರಿಕೆಯಿಂದ ದುಡಿದ ಹಣ ಉಳಿಸುವುದಿರಲಿ,ತಿಂಗಳ ಸಂಸಾರ ನಡೆಸುವುದೂ ಕಷ್ಟವಾಗಿದೆ. ಮಾತಲ್ಲೇ ಮಂಟಪ ಕಟ್ಟುವ ಬಣ್ಣದ ಮಾತುಗಳು ಜನರ ಹೊಟ್ಟೆ ತುಂಬಿಸುವುದಿಲ್ಲ. ಈ ಸತ್ಯವನ್ನು ಮೋದಿಯವರು ಇನ್ನಾದರೂ ಅರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ಫೆಬ್ರವರಿಯಲ್ಲಿ 3 ಬಾರಿ ಏರಿಕೆ ಕಂಡಿದ್ದ ಅಡುಗೆ ಅನಿಲ ಸೋಮವಾರ ಕೂಡ 25 ರೂಪಾಯಿ ಏರಿಕೆ ಕಂಡಿದೆ. 14.2 ಕೆಜಿ ಸಿಲಿಂಡರ್ ಬೆಲೆ 822 ರೂಪಾಯಿ ಆಗಿದ್ದರೆ, 19 ಕೆಜಿಯ ವಾಣಿಜ್ಯ ಉದ್ದೇಶಿತ ಗ್ಯಾಸ್ ಸಿಲಿಂಡರ್ ದರ 1,666 ರೂಪಾಯಿ ಆಗಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 7 ಪೈಸೆ ಇಳಿದಿದ್ದು ಲೀಟರ್‍ಗೆ 94.22 ರೂ ಇದೆ. ಡೀಸೆಲ್ ದರ 5 ಪೈಸೆ ಕಡಿಮೆಯೊಂದಿಗೆ 86.37 ರೂಪಾಯಿ ಆಗಿದೆ.

ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಒತ್ತಾಯ: ತೈಲ ದರ ಹಾಗೂ ಹಾಗೂ ಗ್ಯಾಸ್ ದರ ಏರಿಕೆಗೆ ಆಟೋ ಚಾಲಕರು ತತ್ತರಿಸಿದ್ದು ಆಟೋ ಪ್ರಯಾಣದರ ಏರಿಕೆಗೆ ಚಾಲಕರು ಪಟ್ಟು ಹಿಡಿದಿದ್ದಾರೆ. ಸದ್ಯ ಬೆಂಗಳೂರಲ್ಲಿ 2 ಲಕ್ಷ ಆಟೋಗಳು ಸಂಚರಿಸುತ್ತಿದ್ದು, ಪ್ರಸ್ತುತ ಇರುವ ಪ್ರಯಾಣದರ 25ರೂ.ನಿಂದ 36 ರೂ.ಗೆ ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ. 2013ರಲ್ಲಿ 1.9 ಕಿ.ಮೀಗೆ ಕನಿಷ್ಠ ದರ 20ರಿಂದ 25ರೂ.ಗೆ ಹೆಚ್ಚಿಸಲಾಗಿತ್ತು. ಬಳಿಕ 2019ರಲ್ಲೂ ಪ್ರಯಾಣದರ ಹೆಚ್ಚಳಕ್ಕೆ ಮನವಿ ಮಾಡಲಾಗಿತ್ತು. ಆದ್ರೆ ಸರ್ಕಾರ ಅನುಮತಿ ನೀಡಿರಲಿಲ್ಲ, ಆದ್ರೀಗ ತೈಲ ಮತ್ತು ಗ್ಯಾಸ್ ದರ ಏರಿಕೆ ಬೆನ್ನಲ್ಲೇ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ದರ ಪರಿಷ್ಕರಣೆಗೆ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *