ಸಚಿವ ಮುರುಗೇಶ್ ನಿರಾಣಿ ಮುಂದೆ ಕಷ್ಟ ಹೇಳಿಕೊಂಡ ಕಾರ್ಮಿಕ ಅಮಾನತು

ರಾಯಚೂರು: ಲಿಂಗಸುಗೂರು ತಾಲೂಕಿನ ಹಟ್ಟಿಚಿನ್ನದ ಗಣಿ ಕಂಪನಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮುಂದೆ ಕಷ್ಟ ತೋಡಿಕೊಂಡ ಕಾರ್ಮಿಕನಿಗೆ ಈಗ ಅಮಾನತು ಶಿಕ್ಷೆಯಾಗಿದೆ. ಕಷ್ಟ ಹೇಳಿಕೊಂಡಿದ್ದೇ ತಪ್ಪಾ ಅನ್ನೋ ಪರಸ್ಥಿತಿ ಕಾರ್ಮಿಕರಿಗೆ ಬಂದೊದಗಿದೆ. ತಮ್ಮ ಕಷ್ಟವನ್ನ ಸಚಿವರ ಮುಂದೆ ಬಿಚ್ಚಿಟ್ಟ ಹಟ್ಟಿ ಚಿನ್ನದ ಗಣಿ ಕಂಪನಿ ಕಾರ್ಮಿಕ ಮಲ್ಲಪ್ಪ ಅಮಾನತುಗೊಂಡಿದ್ದಾರೆ. ನಾಗಪ್ಪ, ಸಾಬಣ್ಣ ಎಂಬವರಿಗೆ ಶೋಕಾಸ್ ನೋಟಿಸ್ ಜಾರಿಮಾಡಲಾಗಿದೆ.

ಫೆಬ್ರವರಿ 26 ರಂದು ಹಟ್ಟಿಚಿನ್ನದ ಗಣಿಗೆ ಭೇಟಿ ನೀಡಿದ್ದ ಸಚಿವ ಮುರುಗೇಶ್ ನಿರಾಣಿ ಸಿಬ್ಬಂದಿಗಳಿಂದಲೇ ಕಾಲಿಗೆ ಶೂ ಹಾಕಿಸಿಕೊಂಡು ವಿವಾದಕ್ಕೀಡಾಗಿದ್ದರು. ಅಂದೇ ತಮ್ಮ ಮುಂದೆ ಕಷ್ಟ ತೋಡಿಕೊಂಡ ಕಾರ್ಮಿಕರಿಗೆ ಈಗ ಅಮಾನತು ಶಿಕ್ಷೆಯಾಗಿದೆ. ಮೃತ ಕಾರ್ಮಿಕರ ಕುಟುಂಬದವರಿಗೆ ಉದ್ಯೋಗ ನೀಡುವಂತೆ ಸಚಿವರಿಗೆ ಆಗ್ರಹಿಸಿದ್ದರು. ಅನ್ ಫೀಟ್ ಆದರೆ ಅಂತವರ ಕಟುಂಬದವರಿಗೆ ಕೆಲಸ ಕೊಡಬೇಕು. ಗಣಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸುರಕ್ಷತಾ ಸಾಧನಗಳನ್ನ ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ಮನವಿ ಸಲ್ಲಿಸಲು ಆಗಮಿಸಿದ್ದ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ಸಿಬ್ಬಂದಿಯಿಂದ ಶೂ ತೊಡಿಸಿಕೊಂಡ ಸಚಿವ ಮುರುಗೇಶ್ ನಿರಾಣಿ

ಸಚಿವರ ಮುಂದೆ ತಮ್ಮ ಅಳಲು ತೊಡಿಕೊಳ್ಳಲು ಅವಕಾಶ ಸಿಗದಿದ್ದಕ್ಕೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ನೀವು ಗಣಿ ಆವರಣದಲ್ಲಿ ಗಲಾಟೆ ಮಾಡಲು ಮುಂದಾಗಿದ್ದೀರಿ, ಮಾಧ್ಯಮಗಳ ಮುಂದೆ ಮಾತನಾಡಿದ್ದೀರಿ ಎಂದು ನೋಟಿಸ್ ನೀಡಿ ಅಮಾನತು ಮಾಡಲಾಗಿದೆ. ಮೂರು ದಿನಗಳೊಳಗಾಗಿ ಉತ್ತರ ನೀಡಬೇಕೆಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.

ಕಾರ್ಮಿಕ ಸಾಬಣ್ಣ ತನ್ನ ತಮ್ಮನ ಸಾವಿನ ನಂತರ ಅವರ ಕುಟುಂಬಕ್ಕೆ ಉದ್ಯೋಗ ಕೇಳಲು ಬಂದಿದ್ದ, ಈ ಸಂದರ್ಭದಲ್ಲಿ ರಕ್ತದೊತ್ತಡ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಬಣ್ಣನಿಗೂ ಕಾರಣ ಕೇಳಿ ನೋಟೀಸ್ ಜಾರಿಯಾಗಿದೆ. ದುರ್ನಡತೆ ತೋರಿರುವ ಆರೋಪದಲ್ಲಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *