2021ರ ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು

ಚೆನ್ನೈ: ಇತ್ತೀಚೆಗೆ ಬಿಡುಗಡೆಗೊಂಡ ಸೂರ್ಯ ನಟನೆಯ ಸೂರರೈ ಪೊಟ್ರು ಬಯೋಪಿಕ್ ಚಿತ್ರಪ್ರೇಮಿಗಳ ಮನಗೆದ್ದಿತ್ತು. ಇದೀಗ ಈ ಚಿತ್ರ 2021 ಆಸ್ಕರ್ ರೇಸ್ ಎಂಟ್ರಿ ಪಡೆದುಕೊಂಡಿದೆ.

ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆಫ್ ಆರ್ಟ್ ಆ್ಯಂಡ್ ಸೈನ್ಸ್ ಬಿತ್ತರಿಸಿರುವ ಮಾಹಿತಿ ಪ್ರಕಾರ 366 ಚಲನಚಿತ್ರಗಳನ್ನು 93ನೇ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು. ಇದರಲ್ಲಿ ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ಕೂಡ ಒಂದಾಗಿದೆ.

ಕನ್ನಡಿಗ ಜಿ.ಆರ್ ಗೋಪಿನಾಥ್ ಅವರ ಕಥೆಯನ್ನಾಧರಿಸಿಕೊಂಡು ಮಾಡಿರುವ ಚಿತ್ರ ಸೂರರೈ ಪೊಟ್ರು. ಕ್ಯಾಪ್ಟನ್ ಗೋಪಿನಾಥ್ ದೇಶಕ್ಕಾಗಿ ಕೊಟ್ಟ ಕೊಡುಗೆಯನ್ನು ತಿಳಿಸುವ ಪ್ರಯತ್ನ ಮಾಡಿರುವ ಚಿತ್ರತಂಡ ಸಿನಿಪ್ರಿಯರ ಮನಗೆದ್ದಿತ್ತು.

ಅತೀ ಮನೋಜ್ಞವಾಗಿ ನಟಿಸಿರುವ ಸೂರ್ಯ ಅವರ ನಟನೆ ಹಾಗೂ ಅವರ ಪತ್ನಿ ಪಾತ್ರಧಾರಿಯಾಗಿ ಮಿಂಚಿರುವ ಅರ್ಪಣ ಬಾಲಮುರಳಿ ಅವರು ಸಿನಿಮಾದುದ್ದಕ್ಕೂ ಕೌಟುಂಬಿಕ ಸನ್ನಿವೇಶವನ್ನು ಉತ್ತಮವಾಗಿ ಅಭಿನಯದ ಮೂಲಕ ಸಿನಿರಸಿಕರಿಗೆ ಉಣಬಡಿಸಿದ್ದಾರೆ.

ಸೂರರೈ ಪೊಟ್ರು ಚಿತ್ರವನ್ನು ಸುಧಾ ಕೊಂಗರಾ ನಿರ್ದೇಶನ ಮಾಡಿದ್ದು, ಸೂರ್ಯ ಅವರ ಹೋಮ್ ಬ್ಯಾನರ್ 2ಡಿ ಎಂಟಟೈನ್ಮೆಂಟ್‍ನಲ್ಲಿ ನಿರ್ಮಾಣಮಾಡಲಾಗಿದೆ. ಚಿತ್ರದಲ್ಲಿ ಸಂಗೀತವನ್ನು ಜಿ.ವಿ ಪ್ರಕಾಶ್ ನೀಡಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಇದೀಗ ಸೂರರೈ ಪೊಟ್ರು ಸಿನಿಮಾ 2021ರ ಆಸ್ಕರ್ ಪ್ರಶಸ್ತಿ ಸುತ್ತಿನಲ್ಲಿ ಉತ್ತಮ ನಟ, ಉತ್ತಮ ನಟಿ, ಉತ್ತಮ ಡೈರೆಕ್ಟರ್ ಮತ್ತು ಇತರ ವಿಭಾಗಗಳಲ್ಲಿ ಸ್ವರ್ಧೆಗೆ ತಯಾರಾಗಿದೆ. ಅಕಾಡೆಮಿಯ ವೋಟಿಂಗ್ ಮಾರ್ಚ್ 5 ರಿಂದ 10 ವರೆಗೆ ನಡೆಯಲಿದ್ದು, ನಾಮಿನೇಶನ್ ಅಂತಿಮವಾಗಿ ಮಾರ್ಚ್ 15 ರಂದು ಹೊರಬೀಳಲಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದೆ.

ಕೋವಿಡ್- 19ನಿಂದಾಗಿ ಈಬಾರಿಯ ಆಸ್ಕರ್ ಪ್ರಶಸ್ತಿಯಲ್ಲಿ ಹಲವು ಬದಲಾವಣೆ ಮಾಡಲಾಗಿದ್ದು, ಈ ಬಾರಿ ಒಟಿಟಿಗಳಲ್ಲಿ ಬಿಡುಗಡೆಗೊಂಡ ಚಿತ್ರಗಳನ್ನು ಪ್ರಶಸ್ತಿ ಸುತ್ತಿಗೆ ನಾಮನಿರ್ದೇಶನ ಮಾಡುವ ನಿಯಮವನ್ನು ಜಾರಿಗೆ ತರಲಾಗಿದೆ.

Comments

Leave a Reply

Your email address will not be published. Required fields are marked *