ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ತುದಿಗೆ ಅದಾನಿ, ರಿಲಯನ್ಸ್ ಎಂಡ್ ಹೆಸರು ಬಂದಿದ್ದು ಹೇಗೆ?

ಅಹ್ಮದಾಬಾದ್: ವಿಶ್ವದ ಅಂತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರು ನಾಮಕರಣ ಮಾಡಿದ ಬಳಿಕ ಭಾರೀ ಚರ್ಚೆ ನಡೆಯುತ್ತಿದ್ದು, ಸ್ಟೇಡಿಯಂನಲ್ಲಿನ ಅದಾನಿ, ರಿಲಯನ್ಸ್ ಎಂಡ್ ಬಗ್ಗೆ ಸಹ ಭಾರೀ ಟೀಕೆ ವ್ಯಕ್ತವಾಗಿದೆ.

ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಇಡುವ ಮೂಲಕ ಹಾಗೂ ಪಿಚ್‍ನ ತುದಿಗಳಿಗೆ ಅದಾನಿ, ರಿಲಯನ್ಸ್ ಎಂಡ್ ಎಂದು ಗುರುತಿಸುವ ಮೂಲಕ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಈಗ ಈ ಹೆಸರು ಹೇಗೆ ಬಂದಿದೆ ಎನ್ನುವುದಕ್ಕೆ ಮಾಧ್ಯಮಗಳು ವರದಿ ಪ್ರಕಟಿಸಿವೆ.

ಮೂಲಗಳ ಪ್ರಕಾರ ನರೇಂದ್ರ ಮೋದಿ ಸ್ಟೇಡಿಯಂ ನಿರ್ಮಾಣಕ್ಕೆ ಅದಾನಿ ಹಾಗೂ ರಿಲಯನ್ಸ್ ಕಂಪನಿಗಳು ಹೆಚ್ಚು ದೇಣಿಗೆ ನೀಡಿವೆ. ದೇಣಿಗೆ ಜೊತೆಗೆ ಎರಡೂ ಕಂಪನಿಗಳು ತಲಾ ಒಂದು ಕಾರ್ಪೋರೇಟ್ ಬಾಕ್ಸ್‍ನ್ನು ಖರೀದಿಸಿವೆ. ಇದರ ವೆಚ್ಚ 25 ವರ್ಷಗಳ ಅವಧಿಗೆ ಜಿಎಸ್‍ಟಿ ಸೇರಿ 250 ಕೋಟಿ ರೂ. ಆಗಿದೆ ಎಂದು ಮಾಧ್ಯಮ ವರದಿ ಮಾಡಿದೆ. ದಾನಿಗಳ ಬೇಡಿಕೆಗೆ ಅನುಗುಣವಾಗಿ ಸ್ಟೇಡಿಯಂನಲ್ಲಿರುವ ಪಿಚ್‍ಗಳ ಎಂಡ್‍ಗಳಿಗೆ ಅದಾನಿ ಹಾಗೂ ರಿಲಯನ್ಸ್ ಹೆಸರನ್ನು ಇಡಲಾಗಿದೆ.

ವಿಶೇಷ ಏನೆಂದರೆ ಈಗ ಕಾಂಗ್ರೆಸ್ ನಾಯಕರು ಅದಾನಿ ಎಂಡ್ ಹೆಸರನ್ನು ಇಟ್ಟಿದ್ದಕ್ಕೆ ಬಿಜೆಪಿಯನ್ನು ಟೀಕಿಸುತ್ತಿವೆ. ಆದರೆ ಅದಾನಿ ಎಂಡ್ ಹೆಸರು ಗುಜರಾತ್‍ನಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಇರಿಸಲಾಗಿತ್ತು. ಚಿಮನ್‍ಭಾಯ್ ಪಟೇಲ್ ಅವರ ಅಧಿಕಾರಾವಧಿಯಲ್ಲಿ ಅದಾನಿ ಎಂಡ್ ಎಂದು ಹೆಸರಿಡಲಾಗಿದೆ. ರಿಲಯನ್ಸ್ ಎಂಡ್ ಹೆಸರು ಇರುವ ಜಾಗದಲ್ಲಿ ಈ ಹಿಂದೆ ಸರ್ಕಾರಿ ಸ್ವಾಮ್ಯದ ಜಿಡಿಎಂಸಿ ಹೆಸರು ಇತ್ತು. ಆದರೆ ಇದೀಗ ಹೊಸದಾಗಿ ರಿಲಯನ್ಸ್ ಕಂಪನಿ ಈ ಕ್ರೀಡಾಂಗಣ ನಿರ್ಮಿಸಲು ಆರ್ಥಿಕ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಹೆಸರನ್ನು ಇಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪೂರ್ವ ಮತ್ತು ಪಶ್ಚಿಮ ಸ್ಟ್ಯಾಂಡ್‍ಗಳನ್ನು ಮಾರಾಟ ಮಾಡಲು ಕಾರ್ಪೋರೇಟ್ ಕಂಪನಿಗಳು ಒಳಗೊಳ್ಳುವಂತೆ ಮಾತುಕತೆ ನಡೆಸಲಾಗುತ್ತಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಟ್ಟು 76 ಕಾರ್ಪೋರೇಟ್ ಬಾಕ್ಸ್‍ಗಳಿವೆ.

ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರೀಡಾ ಸಂಕೀರ್ಣದಲ್ಲಿ ನರೇಂದ್ರ ಮೋದಿ ಸ್ಟೇಡಿಯಂ ಒಂದು ಭಾಗವಾಗಿದೆ. ಒಲಿಂಪಿಕ್ ಸ್ಪರ್ಧೆ ನಡೆಸಲು ಸ್ವಿಮ್ಮಿಂಗ್ ಪೂಲ್, ಸ್ಕ್ವಾಶ್ ಅರೆನಾ, ಬ್ಯಾಡ್ಮಿಂಟನ್ ಹಾಗೂ ಟೆನ್ನಿಸ್ ಕೋಟ್ರ್ಸ್ ಸೇರಿದಂತೆ ಹಲವು ಸೌಲಭ್ಯಗಳು ನಿರ್ಮಾಣವಾಗಲಿದೆ.

ನರೇಂದ್ರ ಮೋದಿ ಕ್ರೀಡಾಂಗಣ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಡ್ರೆಸ್ಸಿಂಗ್ ರೂಮ್‍ಗಳಿಗೆ ಹೊಂದಿಕೊಂಡಂತೆ ಜಿಮ್‍ಗಳಿಂದ ಹಿಡಿದು ಆಟ ಮತ್ತು ಅಭ್ಯಾಸ ನಡೆಸಲು ನೇರ ಸಂಪರ್ಕ ಕಲ್ಪಿಸಲಾಗಿದೆ. ಮಾರ್ಚ್‍ನಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯಾವಳಿ ಸಹ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *