ಬೆಳಗಾವಿ ಕುಂದಾ ಜೊತೆ ಗೋಕಾಕ್ ಕರದಂಟು ತಿನ್ನಬಾರದಾ?- ಜಾರಕಿಹೊಳಿಗೆ ಹೆಬ್ಬಾಳ್ಕರ್ ತಿರುಗೇಟು

– ಯಾರೇ ಏನೇ ಒದರಾಡಿದ್ರೂ, ಹೇಳಿದ್ರೂ ದೇವಸ್ಥಾನ ಹಾಳಾಗಲ್ಲ
– ಸತೀಶ್ ಜಾರಕಿಹೊಳಿ ಜೊತೆ ಹೆಬ್ಬಾಳ್ಕರ್ ಜಾಯಿಂಟ್ ವೆಂಚರ್

ಬೆಳಗಾವಿ: ಕುಂದಾನಗರಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ವಾಕ್ಸಮರ ಮುಂದುವರಿದಿದೆ. ರಮೇಶ್ ಜಾರಕಿಹೊಳಿ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಹೆಬ್ಬಾಳ್ಕರ್, ಯಾರೇ ಏನೇ ಒದಾಡಿದ್ರೂ ಹೇಳಿದರೂ ದೇವಸ್ಥಾನ ಹಾಳಾಗಲ್ಲ. ಕ್ಷೇತ್ರದ ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಮುಂದಿನ ಬಾರಿ ಗೋಕಾಕ್ ನಿಂದ ಸ್ಪರ್ಧೆ ಮಾಡುವಂತೆ ಅಲ್ಲಿಯ ಜನರು ಒತ್ತಡ ಹಾಕುತ್ತಿದ್ದಾರೆ. ಬಹುತೇಕರು ಕರೆ ಮಾಡಿ ಮಾತನಾಡಿದ್ದು, ಬೆಂಗಳೂರಿಗೂ ಬಂದು ಭೇಟಿಯಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶಾಸಕರನ್ನ ಗೆಲ್ಲಿಸುವ ಜವಾಬ್ದಾರಿ ನನಗೂ ಕೊಟ್ಟಿದ್ದಾರೆ. ನಾವೆಲ್ಲ ಹೈಕಮಾಂಡ್ ಮುಂದೆ ಕಾರ್ಯಕರ್ತರು, ಹೈಕಮಾಂಡ್ ಸೂಚನೆ ಮೇರೆಗೆ ಕೆಲಸ ಮಾಡುತ್ತೇವೆ ಎಂದರು.

ಬೆಳಗಾವಿಯ 18 ಕ್ಷೇತ್ರಗಳ ಪೈಕಿ ರಮೇಶ್ ಜಾರಕಿಹೊಳಿ ಗ್ರಾಮೀಣ ಕ್ಷೇತ್ರ ಮಾತ್ರ ಫೋಕಸ್ ಮಾಡೋದು ಆಗಬಾರದಿತ್ತು. ಪಿಡಿಓಗಳ ಮಟ್ಟಿಗೆ ಇಳಿದು ರಾಜಕಾರಣ ಮಾಡುವ ಅವಶ್ಯಕತೆ ಇರಲಿಲ್ಲ. ಆದ್ರೆ ಇದನ್ನೆಲ್ಲ ನಿಭಾಯಿಸುವ ಶಕ್ತಿ ನನಗಿದೆ. ನಾನು ರಾಮನ ಭಕ್ತೆ, ರಾಮಮಂದಿರ ನಿರ್ಮಾಣಕ್ಕೆ ಎರಡು ಲಕ್ಷ ದೇಣಿಗೆ ಕೊಟ್ಟಿದ್ದೇನೆ. ನನ್ನನ್ನು ಬಸ್ ನಿಲ್ದಾಣದಲ್ಲಿ ಹುಡುಕಬೇಕು ಅಂತ ಹೇಳಿದ್ದಾರೆ. ರಾಮನ ಪಕ್ಷ ಅಂತ ಹೇಳಿಕೊಳ್ಳುವ ಸಚಿವರು ಒಬ್ಬ ಮಹಿಳೆ ಬಗ್ಗೆ ಮಾತನಾಡೋದನ್ನು ಜನತೆ ಗಮನಿಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಹುಡುಕಬೇಕು ಅಂತಾ ಹೇಳುವುದು. ಧಾರವಾಡ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಬೇಕು ಅನ್ನುವುದು ಅವರಿಗೆ ಶೋಭೆ ತರಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಹುಕಾರನ ಸೋಲಿಗೆ ಜಂಟಿ ಕಾರ್ಯಾಚರಣೆ: ಇದೇ ವೇಳೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಗೋಕಾಕ್ ಲಿಂಗಾಯತ ಮುಖಂಡರನ್ನ ಭೇಟಿಯಾಗಿರುವ ಕುರಿತು ಪ್ರತಿಕ್ರಿಯಿಸಿದರು. ಇದು ನನ್ನ ಮತ್ತು ಸತೀಶ್ ಜಾರಕಿಹೊಳಿಯವರ ಜಾಯಿಂಟ್ ವೆಂಚರ್. ಬೆಳಗಾವಿ ಕುಂದಾ ಜೊತೆಗೆ ಗೋಕಾಕ್ ಕರದಂಟು ತಿನ್ನಬಾರದಾ? ಕುಂದಾ ಜೊತೆಗೆ ಕರದಂಟು ಚೆನ್ನಾಗಿರುತ್ತೆ ಎಂದು ಹೇಳುವ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿ ಹೆಬ್ಬಾಳ್ಕರ್ ಸೋಲಿಸುತ್ತೇನೆ ಅಂದಿದ್ದ ಸಾಹುಕಾರ್ ಗೆ ಹೆಬ್ಬಾಳ್ಕರ್ ತಿರುಗೇಟು ನೀಡಿದರು.

ದೇವರು ಒಳ್ಳೆಯದು ಮಾಡಲಿ: ಕಾಲ ಒಂದೇ ರೀತಿಯಾಗಿ ಇರುವುದಿಲ್ಲ. ಇಂದು ಅವರ ಸರ್ಕಾರ ಇದೆ ನಾಳೆ ನಮ್ಮ ಸರ್ಕಾರ ಇರುತ್ತೆ. ದ್ವೇಷದ ರಾಜಕಾರಣ ನನಗೂ ಶೋಭೆ ತರುವುದಿಲ್ಲ ಅವರಿಗೂ ಶೋಭೆ ತರುವುದಿಲ್ಲ. ಅಭಿವೃದ್ಧಿ ಪರ ರಾಜಕಾರಣ ಬೆಂಬಲಿಸಬೇಕು ಹೊರತು ಕುಂಟಿತಗೊಳಿಸಬಾರದು. ದೇವರು ಅವರಿಗೆ ಒಳ್ಳೆಯದನ್ನ ಮಾಡಲಿ ಎಂದರು.

Comments

Leave a Reply

Your email address will not be published. Required fields are marked *