ಕೆಲಸದ ಆಫರ್ ನೀಡಿ ಕರೆದು ಐಡಿ ಹೆಸರಲ್ಲಿ ಹಣ ದೋಚಿದ್ರು

ಧಾರವಾಡ/ಹುಬ್ಬಳ್ಳಿ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಶಿರಸಿ ಮೂಲದ ಯುವತಿಯನ್ನು ಹುಬ್ಬಳ್ಳಿಗೆ ಕರೆತಂದು 87,650 ರೂ. ಹಣ ಪಡೆದು ಬಳಿಕ ವಂಚನೆ ಮಾಡಿರುವ ಪ್ರಕರಣ ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಶಿರಸಿಯ ಕಸ್ತೂರಬಾ ನಗರದ ಯುವತಿ ರಜನಿ ಆಚಾರ್ಯ ಎಂಬವವರು ವಂಚನೆಗೆ ಒಳಗಾಗಿದ್ದಾರೆ. ಇವರಿಗೆ ಐಕಾನಿವೊ ಟೈರಂಟ್‍ಸ್ ಮಾರ್ಕೆಟ್ ಕಂಪನಿಯ ಸಹಾಯಕ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡ ಸಿದ್ದು, ಪೂಜಾ ಬಿ.ಕೆ., ರಾಣಿ ಮತ್ತು ಸಿಬ್ಬಂದಿಯಾದ ರವಿ, ಸಾಗರ ವಿರುದ್ಧ ದೂರು ದಾಖಲಾಗಿದೆ.

ಕಂಪನಿಯ ಸಹಾಯಕ ವ್ಯವಸ್ಥಾಪಕರಾಗಿ ನೇಮಕವಾಗಿದ್ದೀರಿ ಎಂದು ರಜನಿಗೆ ಕರೆ ಮಾಡಿ ನಂಬಿಸಿದ ಆರೋಪಿಗಳು ಹುಬ್ಬಳ್ಳಿಯ ಉಣಕಲ್ ಬಳಿ ಇರುವ ಕಂಪನಿಗೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಅಲ್ಲಿ ರಜನಿ ಅವರನ್ನು ಭೇಟಿಯಾದ ರಾಣಿ, ತಮ್ಮ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಪೂಜಾ ಎಂಬಾಕೆಯನ್ನು ಪರಿಚಯಿಸಿ ಉಳಿಯಲು ಕೊಠಡಿ ಮಾಡಿಕೊಟ್ಟಿದ್ದರು. ಇದಕ್ಕಾಗಿ 2,650 ರೂ. ಪಡೆದ ಆರೋಪಿಗಳು ಬಳಿಕ ಕಂಪನಿಯ ಐಡಿ ಕೊಡುತ್ತೇವೆ ಎಂದು 65 ಸಾವಿರ ರೂ. ಪಡೆದು ಐದು ದಿನ ತರಬೇತಿ ನೀಡಿದ್ದಾರೆ. ಬಳಿಕ ಆಕೆಯನ್ನು ಊರಿಗೆ ಕಳುಹಿಸಿದ್ದಾರೆ. ಪುನಃ 20 ಸಾವಿರ ರೂ.ಯನ್ನು ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಇಷ್ಟಾದ ಮೇಲೆ ಎಲ್ಲರೂ ಮೊಬೈಲ್ ಸ್ವಿಚ್‍ಆಫ್ ಮಾಡಿ ಸಂಪರ್ಕದಿಂದ ದೂರವಾಗಿದ್ದಾರೆ. ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ವಂಚಕರಿಗಾಗಿ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *