ಇದ್ದಕ್ಕಿದ್ದಂತೆ 250 ಕುರಿಗಳ ಸಾವು- ಕಂಗಾಲಾದ ರೈತರು

ಚಿಕ್ಕಮಗಳೂರು: ಕಾರಣವೇ ಇಲ್ಲದೆ ಇದ್ದಕ್ಕಿದ್ದಂತೆ ಸುಮಾರು 250 ಕುರಿಗಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎರೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ರೈತರು ಆತಂಕವೂ ಹೆಚ್ಚಾಗಿದೆ. ತುಮಕೂರು ಜಿಲ್ಲೆಯ ಶಿರಾ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಕುರಿ ಸಾಕಣೆಕೆಕಾರರು ಕುರಿಗಳನ್ನು ಹೊಡೆದುಕೊಂಡು ಕಡೂರಿನ ಎರೆಹಳ್ಳಿ, ಹುಲ್ಲೇಹಳ್ಳಿ, ಮೇಲೆಹಳ್ಳಿಗೆ ಬಂದಿದ್ದರು. ನಿನ್ನೆ ಸಂಜೆ ಕಡೂರಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಕುರಿಗಳು ತೀವ್ರವಾಗಿ ನೆನೆದಿದ್ದವು. ಇಂದು ಬೆಳಗ್ಗೆಯಿಂದಲೂ ಆಗಾಗ್ಗೆ ಒಂದು-ಎರಡು, ಮೂರು-ನಾಲ್ಕು ಕುರಿಗಳು ಸಾವನ್ನಪ್ಪಿ ಸಂಜೆ ವೇಳೆಗೆ ಸುಮಾರು 250 ಕುರಿಗಳು ಸಾವನ್ನಪ್ಪಿವೆ.

ಕಡೂರು ತಹಶೀಲ್ದಾರ್ ಹಾಗೂ ಪಶುವೈದ್ಯರು ಕೂಡ ಸ್ಥಳದಲ್ಲಿದ್ದು, ಸಾವಿಗೆ ಕಾರಣ ಹುಡುಕುತ್ತಿದ್ದಾರೆ. ಹಲವು ಕುರಿಗಳ ಮರಣೋತ್ತರ ಪರೀಕ್ಷೆ ಕೂಡ ಮುಗಿದಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಏಕಾಏಕಿ ಇಷ್ಟು ಕುರಿಗಳು ಸಾವನ್ನಪ್ಪಿದ್ದರಿಂದ ಸುಮಾರು 40-50 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಇದ್ದಕ್ಕಿದ್ದಂತೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕುರಿಗಳ ಸಾವಿಗೆ ಕಾರಣವೇನೆಂದು ಯಾರಿಗೂ ತಿಳಿದಿಲ್ಲ. ಮಳೆಯಲ್ಲಿ ನೆನೆದಿದ್ದೇ ಸಾವಿಗೆ ಕಾರಣವಾಯ್ತಾ, ಅತಿಯಾದ ಚಳಿಯಿಂದ ಸತ್ತಿರಬಹುದಾ ಅಥವಾ ಮೇಯುವಾಗ ಏನಾದರೂ ತಿಂದಿದ್ದಾವಾ, ಸಂಕ್ರಾಮಿಕ ರೋಗದ ಭೀತಿಯಾ ಎಂದೆಲ್ಲಾ ಸ್ಥಳೀಯರು ಯೋಚಿಸತೊಡಗಿದ್ದಾರೆ. ಸ್ಥಳಕ್ಕೆ ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗ, ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಭಾಗದಿಂದಲೂ ಕುರಿಗಳನ್ನು ಈ ಭಾಗಕ್ಕೆ ಹೊಡೆದುಕೊಂಡು ಬರುತ್ತಾರೆ. ಹೀಗೆ ಬಂದ ಕುರಿಗಳನ್ನ ತೋಟದಲ್ಲಿ ನಿಲ್ಲಿಸಲು ಮಾಲೀಕರು ಹಣ ಕೊಡುತ್ತಾರೆ. ಅದಕ್ಕಾಗಿ ಕುರಿ ಸಾಕಾಣಿಕೆಕಾರರು 500-1000 ಕುರಿಗಳನ್ನ ಇಡೀ ರಾತ್ರಿ ತೋಟದಲ್ಲಿ ನಿಲ್ಲಿಸುತ್ತಾರೆ. ಹೀಗೆ ಇಡೀ ರಾತ್ರಿ ಕುರಿಗಳು ತೋಟದಲ್ಲಿ ನಿಂತರೆ ಒಂದು ಅಥವಾ ಎರಡು ಲೋಡ್ ಗೊಬ್ಬರವಾಗುತ್ತೆ. ಅದಕ್ಕೆ ಕುರಿ ಸಾಕಿದವರಿಗೆ ತೋಟದ ಮಾಲೀಕರು 5, 10, 15 ಸಾವಿರ ರೂ. ನೀಡುತ್ತಾರೆ. ಹೀಗಾಗಿ ದೂರದ ಊರುಗಳಿಂದ ಸಾಕಣಿಕೆದಾರರು ಕುರಿಗಳನ್ನು ಹೊಡೆದುಕೊಂಡು ಈ ಭಾಗಕ್ಕೆ ಬರುತ್ತಾರೆ.

ಪರಿಹಾರ ಸಿಗಲ್ಲ: ಸಿದ್ದರಾಮಯ್ಯ ಸರ್ಕಾರ ಕುರಿ ಸತ್ತರೆ ಐದು ಸಾವಿರ ಪರಿಹಾರವೆಂದು ಘೋಷಿಸಿದ್ದರು. ಆದರೆ ಈಗ ಬಿಜೆಪಿ ಸರ್ಕಾರ ಆ ಯೋಜನೆಯನ್ನು ರದ್ದು ಮಾಡಿರುವುದರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಕುರಿಗಳು ಸಾವನ್ನಪ್ಪಿದರೂ ಸಾಕಿದವರಿಗೆ ಪರಿಹಾರ ಸಿಗೋದು ಅನುಮಾನವಾಗಿದೆ. ಸಾಕಾಣಿಕೆಕಾರರು ಸುಮಾರು 40, 50 ಲಕ್ಷ ಹಣ ಕಳೆದುಕೊಂಡಿದ್ದಾರೆ. ಪ್ರಕೃತಿ ವಿಕೋಪದ ಅಡಿಯಲ್ಲಿ ಅವರಿಗೆ ಪರಿಹಾರ ನೀಡಬೇಕೆಂದು ಕಡೂರಿನ ಮಾಜಿ ಶಾಸಕ ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *