ಟೂಲ್‍ಕಿಟ್ ಕೇಸ್- ಬೆಂಗಳೂರಿನ ದಿಶಾ ರವಿಗೆ ಜಾಮೀನು

ನವದೆಹಲಿ: ಟೂಲ್‍ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ಬೆಂಗಳೂರಿನ ದಿಶಾ ರವಿಗೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಜಾಮೀನು ನೀಡಿದೆ.

ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ನೀಡಿದೆ. ಹೆಚ್ಚುವರಿ ಸೆಶನ್ ಕೋರ್ಟ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಜಾಮೀನು ನೀಡಿದ್ದು, ಇಬ್ಬರು ಶ್ಯೂರಿಟಿ ನೀಡಬೇಕು ಮತ್ತು 1 ಲಕ್ಷ ರೂ. ಬಾಂಡ್ ಪಾವತಿಸಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.

ಸ್ವಿಡನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಿಶಾ ರವಿಯನ್ನ ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯ ಬಂಧಿತ ಆರೋಪಿಯನ್ನು ಐದು ದಿನ ಪೊಲೀಸರ ವಶಕ್ಕೆ ನೀಡಿತ್ತು. ಇದೀಗ ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದರಿಂದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ನೀಡಿದೆ.

21 ವರ್ಷದ ದಿಶಾ ರವಿ ಓರ್ವ ಪರಿಸರ ಹೋರಾಟಗಾರ್ತಿಯಾಗಿದ್ದು, ಭಾರತದಲ್ಲಿ ಫ್ರೈಡೆ ಫಾರ್ ಫ್ಯೂಚರ್ ಹೆಸರಿನ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದರು. ದಿಶಾ ರವಿ ತಂದೆ ಮೈಸೂರಿನಲ್ಲಿ ಅಥ್ಲೆಟಿಕ್ಸ್ ಕೋಚ್ ಆಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ಈ ಟ್ವೀಟ್ ಮಾಡಿ ಬೆಂಬಲ ನೀಡಲು ಟೂಲ್ ಕಿಟ್ ಮುಖಾಂತರ ಹಣ ಪಡೆದ ಆರೋಪ ದಿಶಾ ರವಿ ಮೇಲಿದೆ.

ದೇಶದಲ್ಲಿ ನಡೆಯುತ್ತಿರುವ ಕೃಷಿ ಆಂದೋಲನವನ್ನು ಬೆಂಬಲಿಸಿ ಗ್ರೇಟಾ ಥನ್‍ಬರ್ಗ್ ಇತೀಚೆಗೆ ಟ್ವೀಟ್ ಮಾಡಿದ್ದರು. ಇದರ ಜೊತೆ ಇನ್ನೊಂದು ಟ್ವೀಟ್ ಮಾಡಿ ಒಂದು ಡಾಕ್ಯುಮೆಂಟ್ ರಿಲೀಸ್ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಹೇಗೆ ಚಳವಳಿ ನಡೆಸಬೇಕು ಎಂಬ ಕಾರ್ಯಯೋಜನೆ ಟೂಲ್ ಕಿಟ್ ನಲ್ಲಿತ್ತು. ಆ ಟ್ವೀಟ್ ಭಾರತದಲ್ಲಿನ ಕೃಷಿ ಚಳವಳಿಯಲ್ಲಿ ವಿದೇಶಿ ಶಕ್ತಿಗಳ ಕೈವಾಡವನ್ನು ಬಯಲಿಗೆಳೆದಿದೆ ಎಂದು ಬಿಜೆಪಿ ಆಪಾದಿಸಿತ್ತು. ಈ ಆರೋಪಗಳ ಬೆನ್ನಲ್ಲೇ ಗ್ರೇಟಾ ಥನ್‍ಬರ್ಗ್ ಟೂಲ್ ಕಿಟ್ ತನ್ನ ಟ್ವೀಟ್ ಡಿಲೀಟ್ ಮಾಡಿದ್ದರು. ನಂತರ ಹೊಸ ಟ್ವೀಟ್ ಮಾಡಿ ಹೊಸ ಟೂಲ್ ಕಿಟ್ ಬಿಡುಗಡೆ ಮಾಡಿದ್ದರು.

Comments

Leave a Reply

Your email address will not be published. Required fields are marked *