ಸ್ಯಾಂಕಿ ಕೆರೆ ಟ್ಯಾಂಕ್‍ಬಂಡ್ ರಸ್ತೆ ಅಗಲೀಕರಣಕ್ಕೆ ಅಶ್ವಥ್ ನಾರಾಯಣ್ ಹಸಿರು ನಿಶಾನೆ

– ಕಾಮಗಾರಿ ಶೀಘ್ರ ಆರಂಭಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು: ಮಲ್ಲೇಶ್ವರದ ಪ್ರಸಿದ್ಧ ಸ್ಯಾಂಕಿ ಕೆರೆಯ ಟ್ಯಾಂಕ್‍ಬಂಡ್ ರಸ್ತೆಯನ್ನು ಅಗಲೀಕರಣ ಮಾಡುವುದಕ್ಕೆ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ನಿವಾರಣೆಯಾಗಿದ್ದು, ಕೂಡಲೇ ಅಗಲೀಕರಣ ಕಾಮಾಗಾರಿ ಕೈಗೆತ್ತಿಕೊಳ್ಳುವಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನಲ್ಲಿ ಶುಕ್ರವಾರ ಈ ಬಗ್ಗೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಅವರು, ದಿನೇದಿನೇ ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಈ ರಸ್ತೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಅಗಲೀಕರಣಕ್ಕೆ ಸಂಬಂಧಿಸಿ ಬಹಳ ದಿನಗಳಿಂದ ಜನರ ಬೇಡಿಕೆ ಇದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ನಿರ್ದೇಶನ ನೀಡಿದರು.

ತಡೆಗೋಡೆ ಕಟ್ಟಿ, ಆನಂತರ ಆ ತಡೆಗೋಡೆ ಹಾಗೂ ರಸ್ತೆ ನಡುವೆ ಮಣ್ಣನ್ನು ತುಂಬಬೇಕಾಗಿದ್ದು, ಎರಡು ಮನೆಗಳ ಜಾಗವನ್ನು ಸ್ವಾದೀನ ಮಾಡಿಕೊಳ್ಳಬೇಕಿದೆ. ಈ ಪ್ರಕ್ರಿಯೆಯನ್ನು ಕೂಡಲೇ ಆರಂಭ ಮಾಡುವಂತೆ ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ಮೇಕ್ರಿ ವೃತ್ತದಿಂದ ಬಿಡಿಎ ಜಂಕ್ಷನ್‍ವರೆಗಿನ ಬಳ್ಳಾರಿ ರಸ್ತೆಯನ್ನು ಅಗಲ ಮಾಡುವ ಬಗ್ಗೆಯೂ ಡಿಸಿಎಂ ಚರ್ಚೆ ನಡೆಸಿದರು. ಸುಮಾರು 4 ಕಿ.ಮೀ ಉದ್ದದ ಈ ರಸ್ತೆಯನ್ನು ಅಗಲೀಕರಣ ಮಾಡುವುದರಿಂದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಅದರಿಂದ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ತಪ್ಪಿ ಸುಲಭ ಸಂಚಾರಕ್ಕೆ ಪೂರಕವಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಕೆಲಸವನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.

ನಿಯಮ ಉಲ್ಲಂಘಿಸಿದ ಐಐಎಸ್ಸಿ:
ಮಲ್ಲೇಶ್ವರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುವ ಸಂಗತಿಯನ್ನು ಪಾಲಿಕೆ ಅಧಿಕಾರಿಗಳು ಡಿಸಿಎಂ ಗಮನಕ್ಕೆ ತಂದರು.

ಸಿಡಿಪಿ ಪ್ಲ್ಯಾನ್‍ಗೆ ಪಾಲಿಕೆಯಿಂದ ಒಪ್ಪಿಗೆ ಪಡೆಯದೇ ಸಂಸ್ಥೆಯು ಕಟ್ಟಡವನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಪಾಲಿಕೆ ನೋಟೀಸ್ ನೀಡಿದೆ, ಆದರೂ ಕಾಮಗಾರಿ ಮುಂದುವರಿದಿದೆ. ಮತ್ತೊಮ್ಮೆ ಸ್ವತಃ ತಾವೇ ನೊಟೀಸ್ ಕೊಡುವುದಾಗಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಉಪ ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಐದು ಲಕ್ಷ ಬೀದಿ ದೀಪ:
ಇಡೀ ಬೆಂಗಳೂರು ನಗರದಲ್ಲಿ ಐದು ಲಕ್ಷ ಎಲ್‍ಇಡಿ ಬೀದಿ ದೀಪಗಳನ್ನು ಪಾಲಿಕೆ ವತಿಯಿಂದ ಅಳವಡಿಸಲಾಗುತ್ತಿದ್ದು, ಮುಂಬರುವ ಆರು ತಿಂಗಳಲ್ಲಿ ಒಂದು ಲಕ್ಷ ದೀಪಗಳನ್ನು ಅಳವಡಿಸಲಾಗುವುದು. ಇದು ಸಂಪೂರ್ಣವಾಗಿ ಸೆಂಟ್ರಲೈಸ್ಡ್ ವ್ಯವಸ್ಥೆ ಹೊಂದಿರುತ್ತದೆ. ಏಕಕಾಲದಲ್ಲಿ ಆಫ್ ಅಂಡ್ ಆನ್ ಮಾಡಬಹುದು. ಮಲ್ಲೇಶ್ವರದಲ್ಲೂ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಆ ಬಗ್ಗೆಯೂ ಡಿಸಿಎಂ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಡಿಸಿಎಂ ಸೂಚಿಸಿದರು. ಬೆಂಗಳೂರು ಜಲಮಂಡಳಿ ಅಧ್ಯಕ್ಷ ಜಯರಾಂ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

Comments

Leave a Reply

Your email address will not be published. Required fields are marked *