ಉಮೇಶ್‌ ಕತ್ತಿ ಬಿಪಿಎಲ್‌ ಕಾರ್ಡ್‌ ನಿಯಮ ಹೇಳಿಕೆಗೆ ಬಿಜೆಪಿಯಲ್ಲೇ ಅಪಸ್ವರ

ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಉಮೇಶ್‌ ಕತ್ತಿ ಅವರು ಬಿಪಿಎಲ್ ಕಾರ್ಡ್‌ ವಿಚಾರವಾಗಿ ಮಾತನಾಡಿರುವ ಹೇಳಿಕೆಯ ಬಗ್ಗೆ ರಾಜ್ಯ ಬಿಜೆಪಿಯಲ್ಲೇ ಅಪಸ್ವರ ಕೇಳಿ ಬಂದಿದೆ.

ಯಡಿಯೂರಪ್ಪ ಅವರ ಕ್ಯಾಬಿನೆಟ್ ಸಚಿವರಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಕ್ಯಾಬಿನೆಟ್‌ನಲ್ಲಿ ಎಲ್ಲಿಯೂ ಚರ್ಚೆ ನಡೆದಿಲ್ಲ. ಹೀಗಿದ್ದರೂ ಈ ರೀತಿ ಹೇಳಿಕೆ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಬೈಕ್‌, ಟಿವಿ, ಫ್ರಿಡ್ಜ್‌ ಇದ್ದರೆ ಬಿಪಿಎಲ್ ಪಡಿತರ ರದ್ದು – ಉಮೇಶ್‌ ಕತ್ತಿ

 

ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗದ ಹೊರತು ಈ ನಿಯಮ ಜಾರಿಯಾಗುವುದಿಲ್ಲ. ಉಮೇಶ್ ಕತ್ತಿಯ ನಿಯಮಕ್ಕೆ ಕ್ಯಾಬಿನೆಟ್ ನಲ್ಲಿ ಬೆಂಬಲ ಸಿಗುವ ಸಾಧ್ಯತೆ ಕಡಿಮೆ. ಇನ್ನೆರಡು ದಿನಗಳಲ್ಲಿ ಉಮೇಶ್ ಕತ್ತಿ ಈ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ.

ನಾಳೆ ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ಆಹಾರ ಇಲಾಖೆ ಅಧಿಕಾರಿಗಳ ಸಭೆಯನ್ನುಉಮೇಶ್ ಕತ್ತಿ‌ ಕರೆದಿದ್ದಾರೆ. ಬಳಿಕ ಮಹತ್ವದ ಸುದ್ದಿಗೋಷ್ಠಿ ನಡೆಸಿ ವಿವರ ನೀಡುವ ಸಾಧ್ಯತೆಯಿದೆ.

ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್‌ ಕತ್ತಿ, 5 ಎಕ್ರೆಗಿಂತದ ಹೆಚ್ಚಿನ ಜಮೀನು, ಮನೆಯಲ್ಲಿ ಬೈಕ್‌, ಟಿವಿ, ಫ್ರಿಡ್ಜ್‌ ಇದ್ದವರ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ. ಇವುಗಳಲ್ಲಿ ಯಾವುದಾದರು ಒಂದು ಇದ್ದರೂ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತದೆ. ಇಂಥವರಿಗೆ ತಮ್ಮ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಲು ಮಾರ್ಚ್‌‌ ಅಂತ್ಯದವರೆಗೆ ಸಮಯ ನೀಡಲಾಗುತ್ತದೆ ಎಂದು ಹೇಳಿದ್ದರು.

ಏಪ್ರಿಲ್‌ ಬಳಿಕ ಸರ್ಕಾರ ಕಾರ್ಡ್‌ ಹೊಂದಿರುವವರ ಪರಿಶೀಲನೆ ನಡೆಸಲಿದೆ. ಈ ವೇಳೆ ಎಲ್ಲಾ ಸೌಲಭ್ಯ ಇದ್ದು ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಅವರಿಗೆ ದಂಡದ ಜತೆ ಶಿಕ್ಷೆಯೂ ನೀಡಲಾಗುತ್ತದೆ ಎಂದು ಅವರು ಖಡಕ್‌ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆ ಭಾರೀ ಟೀಕೆ ವ್ಯಕ್ತವಾಗಿತ್ತು.

ಉಮೇಶ್‌ ಕತ್ತಿ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್‌ ಮಾಡಿ ತಿಳಿಸಿ

Comments

Leave a Reply

Your email address will not be published. Required fields are marked *