ಕಾಡಾನೆ ಹಾವಳಿ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಗೋಪಾಲಯ್ಯ ಭರವಸೆ

– ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 10 ಸಾವಿರ ಕೋಟಿ ಮೀಸಲು

ಹಾಸನ: ಜಿಲ್ಲೆಯಲ್ಲಿ ಆನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಾನೆ ಸಮಸ್ಯೆಗೆ ಪರಿಹಾರ ಒದಗಿಸಲು ಫೆ.16 ರಂದು ಸಕಲೇಶಪುರ ಪಟ್ಟಣದಲ್ಲಿ ಅರಣ್ಯ ಸಚಿವ ಅರವಿಂದ್ ಲಿಂಬಾವಳಿ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಸಭೆಗೆ ಆನೆ ಹಾವಳಿಗೆ ತುತ್ತಾದ ಬೆಳೆಗಾರರನ್ನು ಹಾಗೂ ಗ್ರಾಮಸ್ಥರನ್ನು ಆಹ್ವಾನಿಸಲಾಗಿದೆ. ಇಲ್ಲಿ ಅವರ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.

ಆನೆ ಕಾರಿಡಾರ್ ನಿರ್ಮಾಣ ಸಂಬಂಧ ಹಿಂದಿನ ಸರ್ಕಾರ ಕೈಗೊಂಡ ನಿರ್ಣಯ ಹಾಗೂ ಇತ್ತೀಚಿನ ದಿನಗಳಲ್ಲಿ ನಮ್ಮ ಸರ್ಕಾರ ಕೈಗೊಂಡ ಕೆಲಸಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಈಗಾಗಲೇ ಪುಂಡಾನೆ ಸೆರೆ ಸೇರಿದಂತೆ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದು, ಕಾರಿಡಾರ್ ನಿರ್ಮಾಣಕ್ಕೆ ಸಭೆಯಲ್ಲಿ ಜನರಿಂದ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಬಾರಿಯ ಕೇಂದ್ರ ಬಜೆಟ್ ಅಲ್ಲಿ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಲಾಗಿದೆ. ಪ್ರಮುಖವಾಗಿ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹೆದ್ದಾರಿ ರಸ್ತೆ ಸುಧಾರಣೆ ಯೋಜನೆಯಾಗಿ ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ಹಾಗೂ ರಸ್ತೆ ಅಭಿವೃದ್ಧಿಗೆ ಅನುಮೋದನೆ ದೊರೆತಿದ್ದು ಕೇಂದ್ರ ಸಚಿವರಾದ ಸದಾನಂದಗೌಡ ಹಾಗೂ ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ತಾತ್ಕಾಲಿಕ ರಸ್ತೆ ದುರಸ್ತಿಗೆ ಕಠಿಣ ಸೂಚನೆ:
ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಮಾರ್ಹದ ಸಕಲೇಶಪುರ ಹೊರಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ನಡುವೆ ಸಂಚಾರಿ ಯೊಗ್ಯವಾಗಿ ಮಾಡಲು ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯಕ್ಕೆ ಈ ತಿಂಗಳು 28ರವರೆಗೆ ಕಾಲಾವಕಾಶ ನೀಡಲಾಗಿದೆ. ಹದಿನೈದು ದಿನಗಳ ಬಳಿಕ ಸ್ಥಳ ಪರಿಶೀಲನೆ ನಡೆಸಿ ಹೆದ್ದಾರಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈ ಹೆದ್ದಾರಿ ಮಾರ್ಗದಲ್ಲಿ ಬರುವಂತಹ ಸೇತುವೆ ಕಾಮಗಾರಿಯನ್ನು ಸಹ ಪೂರ್ಣ ಪ್ರಮಾಣದಲ್ಲಿ ತ್ವರಿತವಾಗಿ ಮುಗಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಗುವುದು ಎಂದು ಸಚಿವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಪ್ರೀತಮ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್ ಕೆ ಸುರೇಶ್, ಮಾಜಿ ಶಾಸಕ ಬಿ.ಆರ್. ಗುರುದೇವ್, ನಿಜಗುಣ ರಾಜ್, ವಿಜಯ್ ಇದ್ದರು.

Comments

Leave a Reply

Your email address will not be published. Required fields are marked *