ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಿಸಿ- ಕೆಡಿಪಿ ಸಭೆಯಲ್ಲಿ ಸದಸ್ಯರ ಧರಣಿ

– ಅನುದಾನ ಕೊಳೆಯುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ

ರಾಯಚೂರು: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರು ನೆಲದ ಮೇಲೆ ಕುಳಿತು ಧರಣಿ ನಡೆಸಿದರು.

ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು, ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಸದಸ್ಯರು ಕಿಡಿಕಾರಿದರು. 2016-17 ರಲ್ಲಿ ಮಂಜೂರಾದ 642 ಶೌಚಾಲಯ ಕಟ್ಟಡಗಳ ನಿರ್ಮಾಣ ಮಾಡುತ್ತಿಲ್ಲ. ಅನುದಾನ ಬಳಕೆ ಮಾಡದೆ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೇಶವ ರೆಡ್ಡಿ ಹಾಗೂ ಶಿವಜ್ಯೋತಿ ಧರಣಿ ನಡೆಸಿದರು. 120 ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿರ್ಮಾಣಕ್ಕೆ ಈಗಾಗಲೇ ಹಣ ಬಿಡುಗಡೆ ಆಗಿದೆ. ಕಾಮಗಾರಿ ಮಾಡಬೇಕಿದ್ದ ಕ್ಯಾಷೋಟೆಕ್ ಏಜೆನ್ಸಿ ಬೇಜವಾಬ್ದಾರಿ ತೋರಿದ್ದರಿಂದ ಹಣ ಖಜಾನೆಯಲ್ಲೇ ಕೊಳೆಯುತ್ತಿದೆ ಎಂದು ಸದಸ್ಯರು ಕಿಡಿ ಕಾರಿದರು.

ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಮುಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಇಓ ಶೇಕ್ ತನ್ವೀರ್ ಆಸೀಫ್ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾದಿಮನಿ ವೀರಲಕ್ಷ್ಮಿ ಸದಸ್ಯರ ಮನವೊಲಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಕಾಮಗಾರಿ ಕೈಗೆತ್ತಿಕೊಂಡು ತೀವ್ರಗತಿಯಲ್ಲಿ ಮುಗಿಸುವಂತೆ ಸೂಚಿಸಲಾಯಿತು. ಸಿಇಓ ಭರವಸೆ ಮೇರೆಗೆ ಸದಸ್ಯರು ಧರಣಿ ಹಿಂಪಡೆದರು.

Comments

Leave a Reply

Your email address will not be published. Required fields are marked *