‘ಭಜರಂಗಿ 2’ ಮೋಷನ್ ಪೋಸ್ಟರ್ ರಿಲೀಸ್- ಕಿರಾಕಿ ಸಾಮ್ರಾಜ್ಯದ ಹಂತಕನ ಭಯಾನಕ ರೂಪ ದರ್ಶನ

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ನಿರ್ದೇಶಕ ಎ. ಹರ್ಷ ಹ್ಯಾಟ್ರಿಕ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರ ‘ಭಜರಂಗಿ 2’. ಈ ಜೋಡಿ ಈಗಾಗಲೇ ವಜ್ರಕಾಯ, ಭಜರಂಗಿ ಚಿತ್ರದ ಮೂಲಕ ಸೂಪರ್ ಸಕ್ಸಸ್ ನೀಡಿ ಮೋಡಿ ಮಾಡಿದ್ದು, ‘ಭಜರಂಗಿ 2’ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸುವ ಹಾದಿಯಲ್ಲಿದೆ. ಟೀಸರ್ ಮೂಲಕ ಸ್ಯಾಂಡಲ್‍ವುಡ್ ಅಂಗಳದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ ‘ಭಜರಂಗಿ 2’ ಚಿತ್ರ ಇಂದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ.

ಮೋಷನ್ ಪೋಸ್ಟರ್ ನಲ್ಲಿ ಕಿರಾಕಿ ಸಾಮ್ರಾಜ್ಯದ ಕರಾಳ ದರ್ಶನದ ಜೊತೆಗೆ ಕಿರಾಕಿ ಸಾಮ್ರಾಜ್ಯದ ಕೊಲೆಗಡುಕನ ಭಯಂಕರ ರೂಪವನ್ನು ಚಿತ್ರತಂಡ ರಿವೀಲ್ ಮಾಡಿದ್ದು, ಮತ್ತೊಮ್ಮೆ ಮೋಷನ್ ಪೋಸ್ಟರ್ ಮೂಲಕ ಹೊಸ ಕಥೆ ಹೇಳಿ ಚಿತ್ರದ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ ನಿರ್ದೇಶಕ ಎ. ಹರ್ಷ. ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಹೊಸ ಗೆಟಪ್ ನಲ್ಲಿ ಮತ್ತಷ್ಟು ಎನರ್ಜಿಟಿಕ್ ಆಗಿ ತೆರೆ ಮೇಲೆ ಕಾಣಸಿಗಲಿದ್ದು, ‘ಭಜರಂಗಿ 2’ ಫ್ಯಾಂಟಸಿ ಸಿನಿಮಾವಾಗಿದ್ದು ಎರಡು ಶೇಡ್ ನಲ್ಲಿ ಶಿವಣ್ಣ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಶಿವಣ್ಣ ಜೋಡಿಯಾಗಿ ನಟಿ ಭಾವನಾ ಮೆನನ್ ತೆರೆ ಹಂಚಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ‘ಭಜರಂಗಿ 2’ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಈ ಹಿಂದೆ ಕಾಣಿಸಿಕೊಳ್ಳದ ಗೆಟಪ್ ನಲ್ಲಿ, ವಿಭಿನ್ನ ಪಾತ್ರದಲ್ಲಿ ಶ್ರುತಿ ತೆರೆ ಮೇಲೆ ರಂಜಿಸಲಿದ್ದಾರೆ.

ವಜ್ರಕಾಯ, ಭಜರಂಗಿ ಸಿನಿಮಾಗಳಿಗಿಂತಲೂ ಎಲ್ಲಾ ರೀತಿಯಲ್ಲೂ ಅದ್ಧೂರಿತನದಿಂದ ಕೂಡಿರಲಿದೆ ‘ಭಜರಂಗಿ 2 ಚಿತ್ರ’. ಅದರ ಝಲಕ್ ಈಗಾಗಲೇ ಟೀಸರ್ ನಲ್ಲಿ ನೋಡಿಯೂ ಆಗಿದೆ. ಜಯಣ್ಣ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಚಂದನವನದ ಹೆಸರಾಂತ ನಿರ್ಮಾಪಕರು, ವಿತರಕರಾದ ಜಯಣ್ಣ, ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ‘ಭಜರಂಗಿ 2’ ಚಿತ್ರ ಮೂಡಿಬರಲಿದ್ದು, ಸ್ವಾಮಿ.ಜೆ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಟೀಸರ್ ಮೂಲಕ ಧೂಳೆಬ್ಬಿಸಿದ ‘ಭಜರಂಗಿ 2’ ಚಿತ್ರದ ಮೇಲೆ ದೊಡ್ಮನೆ ಅಭಿಮಾನಿ ಬಳಗದ ನಿರೀಕ್ಷೆ ಹೆಚ್ಚಿದ್ದು ಚಿತ್ರ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ.

https://www.youtube.com/watch?v=vZGKtlPP7Ow&feature=youtu.be

Comments

Leave a Reply

Your email address will not be published. Required fields are marked *