ಕುಂಬ್ಳೆ 10 ವಿಕೆಟ್ ವಿಶ್ವದಾಖಲೆ ನೆನಪಿಸಿದ ಬಿಸಿಸಿಐ

ಮುಂಬೈ: ಫೆ. 7, 1999ರಲ್ಲಿ ಜಂಬೋ ಖ್ಯಾತಿಯ ಭಾರತದ ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ್ದರು. 22 ವರ್ಷಗಳ ಹಿಂದಿನ ಈ ದಿನವನ್ನು ಇಂದು ಬಿಸಿಸಿಐ ನೆನಪಿಸಿಕೊಂಡಿದೆ.

ಫೆ.7 1999ರಂದು ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಜಂಬೋ ಪಾಕಿಸ್ತಾನದ ಮೇಲೆ ಸವಾರಿ ಮಾಡಿ 10 ವಿಕೆಟ್ ಕಬಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಈ ದಾಖಲೆಯ ದಿನಕ್ಕೆ ಇಂದು 22 ವರ್ಷ ತುಂಬಿದ್ದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇಂಗ್ಲೆಂಡ್ ಮಾಜಿ ಆಟಗಾರ ಜಿಮ್ ಲೇಕರ್ ಬಳಿಕ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಕಬಳಿಸಿದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡಿರುವ ಜಂಬೋವಿನ ದಾಖಲೆಯನ್ನು ಬಿಸಿಸಿಐ ಮತ್ತೊಮ್ಮೆ ಟ್ವಿಟ್ಟರ್ ನಲ್ಲಿ  ವಿಡಿಯೋ ಪೋಸ್ಟ್ ಮಾಡುವ ಮೂಲಕ ಮೇಲುಕು ಹಾಕಿಕೊಂಡಿದೆ.

ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಭಾರತದ ಪರವಾಗಿ 132 ಟೆಸ್ಟ್ ಪಂದ್ಯವನ್ನಾಡಿ 619 ವಿಕೆಟ್ ಕಬಳಿಸುವ ಮೂಲಕ ವಿಶ್ವದ ಶ್ರೇಷ್ಠ ಬೌಲರ್‍ಗಳ ಪಟ್ಟಿಯಲ್ಲಿ 3 ನೇ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಮತ್ತು ಆಸ್ಟ್ರೇಲಿಯಾದ ಲೆಗ್ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಈ ಪಟ್ಟಿಯಲ್ಲಿ ಒಂದು ಮತ್ತು ಎರಡನೇ ಸ್ಥಾನದಲ್ಲಿರುವ ಅಗ್ರಗಣ್ಯರೊಂದಿಗೆ ಕುಂಬ್ಳೆ ಗುರುತಿಸಿಕೊಂಡಿದ್ದಾರೆ.

1999ರ ಫೆ.7ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ನೀಡಿದ 420 ರನ್‍ಗಳ ಗುರಿ ಬೆನ್ನಟ್ಟಲು ಹೊರಟ ಪಾಕಿಸ್ತಾನ 101 ರನ್‍ಗಳಿಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ ಮುನ್ನಡೆಯುತ್ತಿತ್ತು ಈ ವೇಳೆ ಪಂದ್ಯ ಭಾರತ ತಂಡದ ಕೈ ಜಾರಿತು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಈ ವೇಳೆ ದಾಳಿಗಿಳಿದ ಕುಂಬ್ಳೆ ಸತತ ವಿಕೆಟ್ ಬೇಟೆಯಾಡಿ ಪಾಕಿಸ್ತಾನವನ್ನು ಸೋಲಿನ ಸುಳಿಗೆ ತಳ್ಳಿ ಭಾರತಕ್ಕೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟಿದ್ದರು. ಈ ಪಂದ್ಯದಲ್ಲಿ ಕುಂಬ್ಳೆ ಎರಡು ಇನ್ನಿಂಗ್ಸ್ ನಲ್ಲಿ ಒಟ್ಟು 14 ವಿಕೆಟ್ ಬೇಟೆಯಾಡಿ ಭಾರತದ ಕ್ರಿಕೆಟ್‍ನ ಕಣ್ಮಣಿಯಾಗಿ ಮೂಡಿಬಂದಿದ್ದರು.

Comments

Leave a Reply

Your email address will not be published. Required fields are marked *