5 ರೂ. ಕೇಳಿದ ಪತ್ನಿ- ಸಿಟ್ಟಿನಿಂದ 20 ತಿಂಗಳ ಮಗಳನ್ನೇ ಕೊಲೆಗೈದ ಪಾಪಿ!

– ಮಗು ಅಳುತ್ತಿದ್ದಕ್ಕೆ ಸ್ವೀಟ್‍ಗಾಗಿ ಹಣ ಕೇಳಿದ್ದ ಪತ್ನಿ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಗುವಿಗೆ ಸಿಹಿ ತಿನಿಸು ಕೊಡಿಸಲು ಪತ್ನಿ 5 ರೂ. ಕೇಳಿದ್ದಕ್ಕೆ ಪಾಪಿ ತಂದೆ 20 ತಿಂಗಳ ಕೂಸನ್ನು ಕೊಲೆಗೈಯುವ ಮೂಲಕ ವಿಕೃತಿ ಮೆರೆದಿದ್ದಾರೆ.

ಮಹಾರಾಷ್ಟ್ರದ ಮುಂಬೈನಿಂದ 900 ಕಿ.ಮೀ.ದೂರದಲ್ಲಿರುವ ಗೋಂಡಿಯಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು 28 ವರ್ಷದ ವಿವೇಕ್ ಯುಕೆ ಎಂದು ಗುರುತಿಸಲಾಗಿದೆ. ಮಗು ತುಂಬಾ ಅಳುತ್ತಿದೆ ಖಾಜಾ(ಸಿಹಿ ತಿನಿಸು) ಕೊಡಿಸಲು 5 ರೂ. ಕೊಡಿ ಎಂದು ಕೇಳಿದ್ದಕ್ಕೆ ಕೋಪಗೊಂಡ ಪಾಪಿ ತಂದೆ 20 ತಿಂಗಳ ಮಗುವನ್ನೇ ಕೊಂದಿದ್ದಾನೆ.

ಮಹಿಳೆ ಮಗುವಿಗೆ ಸಿಹಿ ತಿನಿಸು ಕೊಡಿಸಲು 5 ರೂ. ಕೇಳುತ್ತಿದ್ದಂತೆ, ಕೋಪಕೊಂಡ ತಂದೆ ಮಗುವನ್ನು ಎತ್ತಿಕೊಂಡು ಬಾಗಿಲಿಗೆ ಪದೆ ಪದೇ ತಲೆಯನ್ನು ಚೆಚ್ಚಿ ಕೊಲೆ ಮಾಡಿದ್ದಾನೆ.

ನನ್ನ ಪತಿ ಸಂಜೆ ಮನೆಗೆ ಮರಳಿದ ವೇಳೆ ಮಗಳು ವೈಷ್ಣವಿ ಅಳುತ್ತಿದ್ದಳು. ಹೀಗಾಗಿ ಖಾಜಾ ಕೊಡಿಸಲು 5 ರೂ. ನೀಡುವಂತೆ ಕೇಳಿದೆ. ನನ್ನ ಬಳಿ ಚಿಲ್ಲರೆ ಇಲ್ಲ ಎಂದು ವಿವೇಕ್ ಹೇಳಿದ ಎಂದು ಮಗುವಿನ ತಾಯಿ ವರ್ಷಾ ವಿವೇಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಾನು ಹಣ ಕೇಳುತ್ತಿದ್ದಂತೆ ವಿವೇಕ್ ಕೋಪಗೊಂಡನು. ವೈಷ್ಣವಿಯನ್ನು ಎತ್ತಿಕೊಂಡು ಅವಳ ತಲೆಯನ್ನು ಬಾಗಿಲಿಗೆ ಚೆಚ್ಚಿದ. ನಾನು ತಡೆಯಲು ಯತ್ನಿಸಿದಾಗ ನನ್ನ ಮೇಲೆಯೂ ಹಲ್ಲೆ ನಡೆಸಿದ. ಇದರಿಂದ ತುಂಬಾ ನೋವಾಯಿತು. ಆದರೂ ನನ್ನ ಮಗಳನ್ನು ತಿರೋಡಾ ಸಬ್ ಡಿಸ್ಟ್ರಿಕ್ಟ್ ಆಸ್ಪತ್ರೆಗೆ ದಾಖಲಿಸಿದೆ. ಅಷ್ಟರಲ್ಲಾಗಲೇ ಮಗಳು ಸಾವನ್ನಪ್ಪಿದ್ದಳು ಎಂದು ಮಹಿಳೆ ಪೊಲೀಸರಿಗೆ ವಿವರಿಸಿದ್ದಾರೆ.

ಘಟನೆ ಬಳಿಕ ವರ್ಷಾ ತಿರೋಡಾ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವೇಕ್‍ನನ್ನು ಕಸ್ಟಡಿಗೆ ಪಡೆದಿದ್ದಾರೆ.

ಮಗುವಿನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕ್‍ನನ್ನು ಬಂಧಿಸಿದ್ದೇವೆ. ಆರೋಪಿ ಮಗುವಿನ ತಲೆಯನ್ನು ಬಾಗಿಲಿಗೆ ಚೆಚ್ಚಿ ಕೊಲೆ ಮಾಡಿದ್ದಾನೆ. 5 ರೂ. ಸ್ವೀಟ್‍ಗಾಗಿ ಈ ಕೊಲೆ ನಡೆದಿದೆ ಎಂದು ತಿರೋಡಾ ಪೊಲೀಸ್ ಠಾಣೆ ಇನ್‍ಚಾರ್ಜ್ ಯೋಗೇಶ್ ಪರ್ಧಿ ವಿವರಿಸಿದ್ದಾರೆ.

ದಂಪತಿ 2018ರಲ್ಲಿ ವಿವಾಹವಾಗಿದ್ದು, ಪತಿ ಕುಡಿದು ಬಂದು ಹೊಡೆಯುತ್ತಿದ್ದದ್ದಕ್ಕೆ ಪತ್ನಿ ಒಂದು ವರ್ಷ ಮನೆ ಬಿಟ್ಟು ಹೋಗಿದ್ದಳು. 2019ರಲ್ಲಿ ಮಹಿಳೆ ಮತ್ತೆ ತನ್ನ ಮನೆಗೆ ಬಂದಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *