ಸರ್ಕಾರದ ವಿರುದ್ಧ ಗದಗನಲ್ಲಿ ಅನ್ನದಾತರ ಆಕ್ರೋಶ

ಗದಗ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ, ರೈತರ ಬೆಳೆಗೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಕ್ಕಾಗಿ ಆಗ್ರಹಿಸಿ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ರೈತರು ಪ್ರತಿಭಟನೆ ಮಾಡಿದ್ದಾರೆ.

ನೂರಾರು ರೈತರು ಟ್ರ್ಯಾಕ್ಟರ್  ರ‍್ಯಾಲಿ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೂ ಬೃಹತ್ ಪ್ರತಿಭಟನಾ  ರ‍್ಯಾಲಿ ನಡೆಸಿದರು.

ಸರ್ಕಾರ ಕೃಷಿ ಕಾಯ್ದೆ ಹಿಂಪಡೆಯಬೇಕು, ರೈತರ ಬೇಡಿಕೆಗಳನ್ನು ಈಡೇರಿಸಬೇಕು. ರೈತರ ಬೆಳೆಗಳಿಗೆ ಖರೀದಿ ಕೇಂದ್ರ ಸ್ಥಾಪಿಸುವುದರ ಜೊತೆಗೆ ಎಲ್ಲಾ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ರೈತರು ಸರ್ಕಾರಕ್ಕೆ ಆಗ್ರಹಿಸಿದರು. ಮುಂಡರಗಿಯ ಕೊಪ್ಪಳ ಸರ್ಕಲ್ ನಲ್ಲಿ ರಸ್ತೆತಡೆ ಮಾಡಿ ಮಾನವ ಸರಪಳಿ ನಿರ್ಮಿಸಿದರು.

ತಹಶೀಲ್ದಾರ ಕಚೇರಿ ಎದುರು ಸಹ ಅರಭಾವಿ-ಚಳ್ಳಕೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ, ರಸ್ತೆ ಮಧ್ಯ ಕುಳಿತ ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟಕ್ಕೆ ಅನೇಕ ರೈತಪರ, ಕನ್ನಡಪರ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ಸಾಥ್ ನೀಡಿದರು. ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *