ಫೇಸ್ಬುಕ್‍ನಲ್ಲಿ ಪರಿಚಯ, ಹನಿಟ್ರ್ಯಾಪ್- ಇಬ್ಬರು ಯುವತಿಯರು ಸೇರಿ ನಾಲ್ವರು ಅರೆಸ್ಟ್

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿನ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ವಿವಿಧ ರೀತಿಯ ಮೋಸಗಳನ್ನು ಮಾಡಲಾಗುತ್ತಿದೆ. ಫೇಸ್ಬುಕ್‍ನಲ್ಲಿ ಫ್ರಂಡ್ ರಿಕ್ವೆಸ್ಟ್ ಕಳಿಸಿ, ರೂಮ್‍ಗೆ ಕರೆದು ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್‍ನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಬ್ಬರು ಯುವತಿಯರು ಸೇರಿ ನಾಲ್ವರ ಖತರ್ನಾಕ್ ಟೀಂ ನ್ನು ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರೇಶ್ಮಾನೀಮಾ ಮತ್ತು ಜೀನತ್ ಮುಬಿನ್ ತಮ್ಮ ವ್ಯವಹಾರಕ್ಕಾಗಿ ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಈ ಗ್ಯಾಂಗ್‍ನಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವುದು ತಿಳಿದಿದ್ದು, ಬಂಧಿತರು ಈ ಅಪರಾಧ ಚಟುವಟಿಕೆಗಳ ಜೊತೆಗೆ ರೇಶ್ಮಾ ಬೀಡಿ ಕಟ್ಟುವ ವೃತ್ತಿ ನಡೆಸುತ್ತಿದ್ದರೆ, ಜೀನತ್ ಇನ್ಸೂರೆನ್ಸ್ ಹಾಗೂ ಇಕ್ಬಾಲ್ ಮತ್ತು ನಾಜೀಪ್ ಚಾಲಕ ವೃತ್ತಿ ನಡೆಸುತ್ತಿದ್ದರು. ಸದ್ಯ ಆರೋಪಿಗಳಿಂದ ಮೊಬೈಲ್ ಫೋನ್, ನಗದು, ಆಯುಧ, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಬಂಧಿತರನ್ನು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದು, ಪ್ರಕರಣ ಇನ್ನಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.

ಹೇಗೆ ಬಲೆ ಬೀಸುತ್ತಿದ್ದರು?
ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನು ಪರಿಚಯಿಸಿಕೊಂಡು, ಬಳಿಕ ಒಂದು ದಿನ ತಾನು ಮನೆಯಲ್ಲಿ ಒಬ್ಬಂಟಿಯಾಗಿರುವುದಾಗಿ ನಂಬಿಸಿ ಮನೆಗೆ ಆಹ್ವಾನಿಸುತ್ತಿದ್ದರು. ಮನೆಗೆ ಬಂದವರನ್ನು ಉಳಿದ ಆರೋಪಿಗಳಾದ ಇಕ್ಬಾಲ್ ಮಹಮ್ಮದ್ ಮತ್ತು ನಾಸಿಫ್ ಯಾನೆ ಅಬ್ದುಲ್ ಖಾದರ್ ನಾಜೀಪ್ ಎಂಬುವರು ಬೆದರಿಸಿ, ಹಲ್ಲೆ ನಡೆಸಿ, ಬ್ಲಾಕ್ ಮೇಲ್ ಮಾಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದರು.

ಅದೇ ರೀತಿ ಮಂಗಳೂರಿನ ಪಕ್ಕದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆಯ ಯುವಕನನ್ನು ಜನವರಿ 14ರಂದು ಸುರತ್ಕಲ್‍ಗೆ ಕರೆಸಿಕೊಂಡಿದ್ದರು. ಕಾರಿನಲ್ಲಿ ಬಂದಿದ್ದ ಸಂತ್ರಸ್ತನನ್ನು ಮನೆಯೊಳಗೆ ಲಾಕ್ ಮಾಡಿ, ಹಾಕಿ ಸ್ಟಿಕ್ ಮೂಲಕ ಹಲ್ಲೆ ನಡೆಸಿ, ಐದು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ವಿಡಿಯೋ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆ, ಅತ್ಯಾಚಾರ ದೂರು ನೀಡುತ್ತೇವೆ ಎಂದು ಬೆದರಿಸಿದ್ದಾರೆ.

ಸಂತ್ರಸ್ತನ ಬಳಿ ಹಣ ಇಲ್ಲದ್ದರಿಂದ ಆತನ ಕಾರನ್ನು ತೆಗೆದುಕೊಂಡು, ಒಂದು ದಿನದ ಬಳಿಕ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಕಂಗೆಟ್ಟ ಯುವಕ ಜನವರಿ 16ಕ್ಕೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಆರೋಪಿಗಳನ್ನು ಖೆಡ್ಡಾಕೆ ಬೀಳಿಸಿದ್ದಾರೆ. ವಿಚಾರಣೆ ಸಂದರ್ಭ ಈ ಗ್ಯಾಂಗ್ ಕಳೆದ ಏಳೆಂಟು ತಿಂಗಳಲ್ಲಿ ಐದಾರು ಮಂದಿಗೆ ಈ ರೀತಿ ಹನಿಟ್ರ್ಯಾಪ್ ಮಾಡಿರೋದು ಬೆಳಕಿಗೆ ಬಂದಿದೆ.

Comments

Leave a Reply

Your email address will not be published. Required fields are marked *