‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಆಡಿಯೋ ಬಿಡುಗಡೆ- ಆಸ್ಕರ್ ಕೃಷ್ಣ ನಿರ್ದೇಶನದ ಚಿತ್ರ

ಸ್ಕರ್ ಕೃಷ್ಣ ನಿರ್ದೇಶಿಸಿ ನಟಿಸಿರುವ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಖ್ಯಾತ ಚಿತ್ರನಟಿ ಪ್ರೇಮಾ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಆಸ್ಕರ್, ಮಿಸ್ ಮಲ್ಲಿಗೆ, ಮನಸಿನ ಮರೆಯಲಿ ಸಿನಿಮಾ ನಿರ್ದೇಶಿಸಿ ಸೈ ಎನಿಕೊಂಡಿರುವ ಆಸ್ಕರ್ ಕೃಷ್ಣ ನಿರ್ದೇಶನದ ಐದನೇ ಚಿತ್ರ ಇದಾಗಿದೆ. ವಿಶೇಷ ಅಂದ್ರೆ ಆಸ್ಕರ್ ಕೃಷ್ಣ ಚಿತ್ರದಲ್ಲಿ ಬಣ್ಣ ಹಚ್ಚುವುದರ ಮೂಲಕ ನಟನೆಗೂ ಸೈ ಎಂದಿದ್ದಾರೆ.

‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಕ್ರೈಂ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಇಬ್ಬರು ಸ್ನೇಹಿತರ ನಡುವಿನ ಗೆಳೆತನ, ಹುಡುಗಾಟ, ಸೇರಿದಂತೆ ಸಾಮಾಜಿಕ ಜೀವನದ ಬಗ್ಗೆಯೂ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಲೋಕೇಶ್ ಸೂರ್ಯ, ನಿರ್ದೇಶಕ ಆಸ್ಕರ್ ಕೃಷ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇಷ್ಟು ದಿನ ತೆರೆಹಿಂದೆ ಸೈ ಎನಿಸಿಕೊಂಡಿದ್ದ ಆಸ್ಕರ್ ಕೃಷ್ಣ ಇದೇ ಮೊದಲ ಬಾರಿಗೆ ತೆರೆ ಮೇಲೆ ಕಮಾಲ್ ಮಾಡಲು ಹೊರಟಿದ್ದಾರೆ.

ನಾಯಕಿಯಾಗಿ ಮಲಯಾಳಂ ನಟಿ ಗೌರಿ ನಾಯರ್ ಅಭಿನಯಿಸಿದ್ದಾರೆ. ನಾಯಕ ನಟ ಲೋಕೇಂದ್ರ ಸೂರ್ಯ ನಟನೆ ಜೊತೆಗೆ ಚಿತ್ರಕಥೆ, ಸಂಭಾಷಣೆ ಬರೆಯುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ರೆಡ್ ಆ್ಯಂಡ್ ವೈಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಸೆವೆನ್ ರಾಜ್ ಬಂಡವಾಳ ಹಾಕಿದ್ದಾರೆ. ನಿರ್ಮಾಣದ ಜೊತೆ ಅಭಿನಯಕ್ಕೂ ಹೆಜ್ಜೆ ಇಟ್ಟಿರುವ ಸೆವೆನ್ ರಾಜ್ ಮೊದಲ ಬಾರಿಗೆ ಖಳನಟನಾಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕುಣಿಗಲ್, ತುಮಕೂರು, ಬೆಂಗಳೂರು, ಸುತ್ತಮುತ್ತ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರೀಕರಣ ನಡೆಸಲಾಗಿದ್ದು, ಗಗನ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.

ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅನಂತ್ ಆರ್ಯನ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೂಡಿಬಂದಿವೆ. ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಜನವರಿ ಕೊನೆಯ ವಾರ ಅಥವಾ ಫೆಬ್ರವರಿಯಲ್ಲಿ ಚಿತ್ರವನ್ನು ತೆರೆ ಮೇಲೆ ತರೋ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.

Comments

Leave a Reply

Your email address will not be published. Required fields are marked *