ಟೀಚರ್ ಹಿಂದೆ ಬಿದ್ದ ಭಗ್ನ ಪ್ರೇಮಿಯಿಂದ ಮದುವೆ ಮನೆಯಲ್ಲಿ ಗುಂಡಿನ ದಾಳಿ

ಕಾರವಾರ: ಭಗ್ನಪ್ರೇಮಿ ಮದುವೆ ಮನೆಯಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಅಂಕೋಲ ತಾಲೂಕಿನ ಸಕ್ಕಲ ಬ್ಯಾಣ ಎಂಬ ಊರಿನಲ್ಲಿ ವಧುವಿನ ಚಿಕ್ಕಮ್ಮನ ಮನೆಯಲ್ಲಿ ಮದುವೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಬೆಳ್ಳಂಬೆಳಗ್ಗೆ ಪಟಾಕಿ ಹೊಡೆದಂತೆ ಸದ್ದು ಕೇಳಿದೆ. ಹೊರಗೆ ಬಂದು ನೋಡಿದಾಗ ರೌಡಿ ಶೀಟರ್ ರಾಜೇಶ್ ಎಂಬಾತ ಮನೆಯ ಮುಂದೆ ನಿಂತು ಗುಂಡು ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಅದೃಷ್ಟವಶಾತ್ ಯಾರು ಹೊರಗೆ ಬರದ ಕಾರಣ ಯಾರಿಗೂ ಅಪಾಯವಾಗಿಲ್ಲ. ಇನ್ನು ಆತ ಹೊಡೆದ ಗುಂಡು ಮನೆಯ ಕಿಟಕಿ ಭಾಗದಲ್ಲಿ ತಾಗಿದೆ. ನಂತರ ಆತ ಪರಾರಿಯಾಗಿದ್ದಾನೆ.

ಘಟನೆ ಏನು ?
ಭವ್ಯಾ (ಹೆಸರು ಬದಲಾಯಿಸಲಾಗಿದೆ) ಎನ್ನುವ ಯುವತಿ ಸುಂಕಸಾಳದಲ್ಲಿ ಕಾಲೇಜು ಓದುತ್ತಿದ್ದಳು. ಈ ವೇಳೆ ಭವ್ಯಾ ಹಿಂದೆ ವಜ್ರಳ್ಳಿ ಗ್ರಾಮದ ರೌಡಿ ಶೀಟರ್ ರಾಜೇಶ್ ಗಣಪತಿ ಗಾಂವಕರ್ ಹಿಂದೆ ಬಿದ್ದಿದ್ದನು. ಆದರೇ ಯುವತಿ ಈತನನ್ನು ಪ್ರೀತಿಸಿರಲಿಲ್ಲ ಎಂದು ಸಂಬಂಧಿಗಳು ತಿಳಿಸಿದ್ದಾರೆ. ಇನ್ನು ರಾಜೇಶ್ ಈ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಗುಂಡು ಹಾರಿಸಿದ್ದನು.

ಯುವತಿ ಕಾಲೇಜು ಶಿಕ್ಷಣ ಮುಗಿಸಿ ಬಿ.ಎಡ್ ಮಾಡಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಈ ವೇಳೆ ಕೇಣಿಯ ಪ್ರಕಾಶ್ ಎಂಬವರ ಜೊತೆ ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ಇಂದು ಮದುವೆ ನೆರವೇರುತಿತ್ತು. ಆದರೆ ಇಂದು ಏಕಾಏಕಿ ಬಂದ ರಾಜೇಶ್ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಮಧುವಿನ ಮನೆಯ ಕಿಟಕಿ ಭಾಗ ಹಾಗೂ ಒಳಭಾಗದಲ್ಲಿ ಗುಂಡು ತಾಗಿದ್ದು ಯಾರಿಗೂ ಅಪಾಯವಾಗಿಲ್ಲ.

ಬಿಗಿ ಪೊಲೀಸ್ ವ್ಯವಸ್ತೆಯಲ್ಲಿ ವಿವಾಹ: ಗುಂಡಿನ ದಾಳಿಯಿಂದ ಬೆದರಿದ ಕುಟುಂಬಕ್ಕೆ ಪೊಲೀಸ್ ಭದ್ರತೆ ನೀಡಲಾಯಿತು. ಮದುವೆ ಮಂಟಪದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ವಿವಾಹ ಸಾಂಗವಾಗಿ ನೆರವೇರಿತು.

Comments

Leave a Reply

Your email address will not be published. Required fields are marked *