ಹೊಸ ವರ್ಷಾಚರಣೆ – ಬೆಂಗಳೂರಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ್ಲೇ ನಿಷೇಧಾಜ್ಞೆ ಜಾರಿ

ಬೆಂಗಳೂರು: ಈ ವರ್ಷ ಹೊಸ ವರ್ಷದ ಪಾರ್ಟಿಗೆ ಮಹಾಮಾರಿ ಕೊರೊನಾ ಅಡ್ಡಿಪಡಿಸಿದೆ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಹೌದು. ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಇಂದು ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಹೇರಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ರೂಪಾಂತರ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಹೊಸ ಮಾದರಿಯ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅದರಿಂದ ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ದೃಷ್ಟಿಯಿಂದ ಇಂದು ಮಧ್ಯಾಹ್ನದಿಂದಲೇ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಹೀಗಾಗಿ ಗುಂಪು ಗುಂಪಾಗಿ ಓಡಾಡಿದರೆ ಕೇಸ್ ಬೀಳುವುದು ಪಕ್ಕಾ ಆಗಿದೆ. ಇದನ್ನೂ ಓದಿ: ಡಿ.31ರಂದು ರಾತ್ರಿ 8ರಿಂದ ಆಯ್ದ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ – ಹೋಟೆಲ್ ಟಿಕೆಟ್ ಇದ್ರೆ ಮಾತ್ರ ಅವಕಾಶ

ಇಂದು ಮಧ್ಯಾಹ್ನ 12 ರಿಂದ ನಾಕಾಬಂಧಿ ಆರಂಭವಾಗಲಿದ್ದು, ಪ್ರತಿ ವಾಹವನ್ನೂ ಪೊಲೀಸರು ತಪಾಸಣೆ ಮಾಡಲಿದ್ದಾರೆ. ಪ್ರತಿಯೊಂದು ವಾಹನದ ನಂಬರ್ ಪ್ಲೇಟ್ ಫೋಟೋ ತೆಗೆದುಕೊಳ್ಳಲಿದ್ದಾರೆ. ಸಿಟಿಯಿಂದ ಹೊರಗೆ, ಒಳಗೆ ಬರುವ ವಾಹನದ ಮೇಲೆ ಹದ್ದಿನಕಣ್ಣು ಇಡಲಾಗುತ್ತಿದ್ದು, ಹೊರವಲಯದ ರೆಸಾರ್ಟ್‍ನಲ್ಲಿ ಪಾರ್ಟಿ ಶಂಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರತಿಯೊಂದು ಪಬ್, ರೆಸ್ಟೋರೆಂಟ್‍ಗಳಿಗೆ ನೋಟಿಸ್ ನೀಡಲಾಗುತ್ತಿದೆ. ವಾಟೆಂಡ್ ಕ್ರಿಮಿನಲ್‍ಗಳ ಫೋಟೋಗಳನ್ನು ನೀಡಿರುವ ಪೊಲೀಸರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಔಟ್‍ಲೆಟ್‍ಗಳಲ್ಲಿ ಬಲ್ಕ್ ಆಗಿ ಖರೀದಿ ಮಾಡುವವರ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಶೇಖರಣೆ ಮಾಡಿದ್ರೆ ಕ್ರಮ Pಕೈಗೊಳ್ಳಲಾಗುತ್ತದೆ. ಅಬಕಾರಿ ಇಲಾಖೆಯೂ ಪೊಲೀಸ್ ಇಲಾಖೆಗೆ ಪದೇ ಪದೇ ಮಾಹಿತಿ ನೀಡಲು ಸೂಚಿಸಲಾಗಿದೆ.

ಇನ್ನು ಹೊಸ ವರ್ಷಕ್ಕೆ ಟೈಟ್ ಸೆಕ್ಯೂರಿಟಿ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯ ಹಾಟ್‍ಸ್ಪಾಟ್‍ಗಳಾದ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸುತ್ತ ಭರದ ಸಿದ್ಧತೆ ನಡೆಯುತ್ತಿದೆ. ಪೊಲೀಸರು ಅಲ್ಲಲ್ಲಿ ಪೆಂಡಾಲ್ ಗಳನ್ನ ಅಳವಡಿಸುತ್ತಿದ್ದಾರೆ. ಈ ಮೂಲಕ ಪ್ರಮುಖ ಸ್ಥಳಗಳಲ್ಲಿ ಈಗಾಗಲೇ ಭದ್ರತೆ ಕೈಗೊಳ್ಳಲಾಗುತ್ತಿದೆ.

Comments

Leave a Reply

Your email address will not be published. Required fields are marked *