ಫ್ಲ್ಯಾಟ್ ಗಳಲ್ಲೇ ನಾವು ಐಸೋಲೇಟ್ ಆಗ್ತೀವಿ – ಅಪಾರ್ಟ್‍ಮೆಂಟ್ ನಿವಾಸಿಗಳು ಕಣ್ಣೀರು

– ಅಪಾರ್ಟ್‍ಮೆಂಟ್ ಸೀಲ್‍ಡೌನ್ 

ಬೆಂಗಳೂರು: ಸಿಲಿಕಾನ್ ಸಿಟಿಯ ವಸಂತಪುರದಲ್ಲಿರುವ ಅಪಾರ್ಟ್‍ಮೆಂಟ್‍ವೊಂದರಲ್ಲಿ ಒಂದೇ ಕುಟುಂಬದ ಮೂವರಿಗೆ ಬ್ರಿಟನ್ ವೈರಸ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾವು ಇಲ್ಲೇ ಐಸೋಲೇಟ್ ಆಗುತ್ತೇವೆ. ಸರ್ಕಾರದ ಸೌಲಭ್ಯಗಳ ಮೇಲೆ ನಂಬಿಕೆ ಇಲ್ಲ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳ ಎದುರು ಅಪಾರ್ಟ್‍ಮೆಂಟ್ ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ.

ಬೇಕಾದ್ರೆ ಅಪಾರ್ಟ್‍ಮೆಂಟ್ ಸೀಲ್‍ಡೌನ್ ಮಾಡಿ ನಾವು ಇಲ್ಲೇ ಇರುತ್ತೇವೆ. ಸರ್ಕಾರ ಕೊಡುವ ಊಟ, ಶೌಚಾಲಯ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ನಾವು ಬರುವುದಿಲ್ಲ ಅಪಾರ್ಟ್‍ಮೆಂಟ್‍ನಲ್ಲೇ ಇರುತ್ತೇವೆ. ನಮ್ಮ ಫ್ಲ್ಯಾಟ್ ಗಳಲ್ಲೇ ನಾವು ಐಸೋಲೇಟ್ ಆಗುತ್ತೇವೆ ಎಂದು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

ಅಪಾರ್ಟ್‍ಮೆಂಟ್‍ನಲ್ಲಿದ್ದ ಒಂದೇ ಕುಟುಂಬದ ಮೂವರಿಗೆ ಹೊಸ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅಪಾರ್ಟ್‍ಮೆಂಟ್‍ನಲ್ಲಿದ್ದ ಎಲ್ಲರಿಗೂ ಕೋವಿಡ್ ಪತ್ತೆ ಪರೀಕ್ಷೆ ಮಾಡಲಾಗುತ್ತಿದೆ. ಇನ್ನು 28 ದಿನಗಳ ಕಾಲ ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ರೂಪಾಂತರಿ ಕೊರೊನಾ ಪತ್ತೆಯಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಕೆ. ಸುಧಾಕರ್, ಕೊರೊನಾ ವೈರಾಣುವಿನ ರೂಪಾಂತರಗೊಂಡ ಪ್ರಬೇಧವನ್ನು ಪತ್ತೆ ಮಾಡಲು ಯುಕೆನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದ್ದು. ಹೊಸ ಪ್ರಬೇಧದ ವೈರಸ್ ಹರಡದಂತೆ ತಡೆಯಲು ತಜ್ಞರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಕಳೆದ ಐದು ದಿನದಿಂದ ಬೆಂಗಳೂರಿಗೆ ಬಂದ 13 ಜನರಲ್ಲಿ ಪಾಸಿಟಿವ್ ವರದಿ ಬಂದಿದೆ. ಮಾಲ್ಡೀವ್ಸ್ ನಿಂದ ಬಂದವರಲ್ಲೂ ಹೆಚ್ಚು ಪಾಸಿಟಿವ್ ಸಂಖ್ಯೆ ಬರುತ್ತಿದೆ. ಇಟಲಿಯಿಂದ ಬಂದವರಲ್ಲೂ ಕೂಡ ಗುಣಲಕ್ಷಣಗಳು ಪತ್ತೆಯಾಗಿದ್ದು, ಕ್ವಾರಂಟೈನ್ ಆಗಬೇಕು ಎಂದು ಆರೋಗ್ಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *