ನಾಲ್ಕು ಜನರ ಜೀವನಕ್ಕೆ ಗಿಫ್ಟ್ ನೀಡಿದ ಬ್ರೇನ್ ಡೆಡ್ ಮಹಿಳೆ

ನವದೆಹಲಿ: ಬ್ರೇನ್ ಡೆಡ್‍ನಿಂದ ಸಾವನ್ನಪ್ಪುತ್ತಿದ್ದ ಮಹಿಳೆ ತನ್ನ ಅಂಗಾಂಗಗಳನ್ನು ದಾನ ನೀಡುವ ಮೂಲಕ ನಾಲ್ಕು ಜನರ ಜೀವನಕ್ಕೆ ಗಿಫ್ಟ್ ನೀಡಿದ್ದಾರೆ.

ಗಾಜಿಯಾಬಾದ್‍ನ ಇಂದಿರಾಪುರಂ ನಿವಾಸಿ ಸಯ್ಯದ್ ರಫತ್ ಪರ್ವೀನ್ ಎಂಬ 41 ವರ್ಷದ ಮಹಿಳೆ ಮೆದುಳಿನಲ್ಲಿ ರಕ್ತನಾಳಗಳ ಮೂಲಕ ರಕ್ತಸ್ರಾವವಾಗಿ ಬದುಕುವುದು ಕಷ್ಟವಾಗಿತ್ತು. ವೈಶಾಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ ಪರಿಸ್ಥಿತಿ ತುಂಬಾ ಕಠಿಣವಾಗಿದ್ದರಿಂದ ಬ್ರೇನ್ ಡೆಡ್ ಆಗಿದೆ ಎಂದು ಗುರುವಾರ ಘೋಷಿಸಿದರು.

ಈ ವೇಳೆ ಕೌನ್ಸಲಿಂಗ್ ಬಳಿಕ ಮಹಿಳೆ ಕುಟುಂಬಸ್ಥರು ಆಕೆಯ ಅಂಗಾಂಗ ದಾನ ಮಾಡಲು ಒಪ್ಪಿಕೊಂಡಿದ್ದಾರೆ. ಹೃದಯ, ಕಿಡ್ನಿ ಹಾಗೂ ಲಿವರ್‍ನ್ನು ದಾನ ಮಾಡಿದ್ದಾರೆ. ಈ ಕುರಿತು ಮ್ಯಾಕ್ಸ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗದ ಉಪಾಧ್ಯಕ್ಷ ಡಾ.ಗೌರವ್ ಅಗರ್ವಾಲ್ ಮಾಹಿತಿ ನೀಡಿ, ಕುಟುಂಬಸ್ಥರ ಒಪ್ಪಿಗೆ ಪಡೆದು ತಕ್ಷಣವೇ ರಾಷ್ಟ್ರೀಯ ಅಂಗಾಂಗ ಹಾಗೂ ಅಂಗಾಂಶ ಕಸಿ ಸಂಸ್ಥೆಗೆ ತಿಳಿಸಿ ಅಂಗಾಗ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಂಗಾಂಗಗಳ ಕಸಿಗಾಗಿ ಹಲವು ವೈದ್ಯರ ತಂಡಗಳು ರಾತ್ರಿಯಿಡೀ ಕಾರ್ಯನಿರ್ವಹಿಸಿ, ಕಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಹೃದಯವನ್ನು ಸಹ ಅಂಬುಲೆನ್ಸ್ ನಲ್ಲಿ ಗ್ರೀನ್ ಕಾರಿಡಾರ್ ಮೂಲಕ ಸಾಕೇತ್‍ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಕಿಡ್ನಿ ಹಾಗೂ ಲಿವರ್‍ನ್ನು ನಮ್ಮ ಆಸ್ಪತ್ರೆಯ ಇಬ್ಬರು ರೋಗಿಗಳಿಗೆ ಕಸಿ ಮಾಡಲಾಯಿತು. ಇನ್ನೊಂದು ಕಿಡ್ನಿಯನ್ನು ಗುರುಗ್ರಾಮದ ಆರ್ಟಿಮಿಸ್ ಆಸ್ಪತ್ರೆಗೆ ಕೇವಲ 45 ನಿಮಿಷಗಳಲ್ಲಿ ಕೊಂಡೊಯ್ಯಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ಗಾಜಿಯಾಬಾದ್, ದೆಹಲಿ ಪೊಲೀಸರಿಂದ ಗ್ರೀನ್ ಕಾರಿಡಾರ್ ನಿರ್ಮಿಸಿ ವೈಶಾಲಿಯಿಂದ ಸಾಕೇತ್ ಆಸ್ಪತ್ರೆಗೆ ಹೃದಯವನ್ನು ಕೊಂಡೊಯ್ಯಲಾಯಿತು. 23.8 ಕಿ.ಮೀ.ಯನ್ನು ಕೇವಲ 18 ನಿಮಿಷಗಳಲ್ಲಿ ಕ್ರಮಿಸಿ ಮಧ್ಯರಾತ್ರಿ 1.58ಕ್ಕೆ ಆಸ್ಪತ್ರೆ ತಲುಪಿಸಲಾಯಿತು ಎಂದು ಮ್ಯಾಕ್ಸ್ ಹೆಲ್ತ್ ಕೇರ್‍ನ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡ್‍ನ 56 ವರ್ಷದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದವರಿಗೆ ಹೃದಯವನ್ನು ಕಸಿ ಮಾಡಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಹೃದಯ ಕಸಿಯ ನಿರ್ದೇಶಕ ಡಾ.ಕೇವಲ್ ಕೃಷ್ಣನ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *