5 ದಿನದಲ್ಲಿ ಎರಡು ಮದ್ವೆಯಾದ ಟೆಕ್ಕಿ – ಆರನೇ ದಿನ ಕೈ ಕೊಟ್ಟು ಪರಾರಿ

– ಮೊದಲ ಮದ್ವೆಗೆ ಬಂದವರು 2ನೇ ವಿವಾಹಕ್ಕೂ ಹಾಜರಿ

ಭೋಪಾಲ್: ಐದು ದಿನದಲ್ಲಿ ಇಬ್ಬರನ್ನ ಮದುವೆಯಾದ ಟೆಕ್ಕಿ ತನ್ನ ರಹಸ್ಯ ಬಯಲಾಗುತ್ತಿದ್ದಂತೆ ಪತ್ನಿಯರಿಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ಈ ಘಟನೆ ನಡೆದಿದೆ.

26 ವರ್ಷದ ಸಾಫ್ಟವೇರ್ ಇಂಜಿನೀಯರ್ ನವೀನ್ ಪಾಂಚಾಲ್ ಎರಡು ಮದುವೆಯಾದ ಯುವಕ. ಡಿಸೆಂಬರ್ 2ರಂದು ಖಾಂದ್ವಾ ಮೂಲದ ಪೂಜಾಳನ್ನ ನವೀನ್ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದನು. ಪೂಜಾ ತಂದೆ ಮೋಹನ್ ವರದಕ್ಷಿಣೆ ನೀಡಿ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು. ಇತ್ತ ಮೊದಲ ರಾತ್ರಿ ಮುಗಿದ ಬಳಿಕ ಮತ್ತೆ ಬರೋದಾಗಿ ಹೇಳಿ ನವೀನ್ ಪತ್ನಿಯನ್ನ ತವರಿನಲ್ಲೇ ಬಿಟ್ಟು ಬಂದಿದ್ದನು.

ಡಿಸೆಂಬರ್ 7ರಂದು ಉಮಾರಿಮೌನ್ ಗಣೇಶಪುರಿ ಕಾಲೋನಿ ನಿವಾಸಿ ನಂದಿನಿ ಜಾಧವ್ ಯುವತಿ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದನು. ಆದ್ರೆ ಇಲ್ಲಿ ತನ್ನ ಜೊತೆಗೆ ಸ್ನೇಹಿತರನ್ನ ಕರೆದೊಯ್ಯದ ನವೀನ್, ತನ್ನ ಸಂಬಂಧಿಕರೆಂದು ನಂದಿನಿ ಕುಟುಂಬಕ್ಕೆ ಪರಿಚಯಿಸಿದ್ದನು.

ರಹಸ್ಯ ಬಯಲಾಗಿದ್ದೇಗೆ?: ಪೂಜಾ ಜೊತೆಗಿನ ಮದುವೆ ಹಾಜರಾಗಿದ್ದ ಕೆಲವರು ನಂದಿನಿ ವಿವಾಹಕ್ಕೂ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆ ಮೇಲೆ ನಂದಿನಿ ಪಕ್ಕ ನಿಂತಿದ್ದ ನವೀನ್ ಕಂಡು ಆಶ್ಚರ್ಯಚಕಿತರಾದ ಅತಿಥಿಗಳು ಫೋಟೋ ಕ್ಲಿಕ್ಕಿಸಿ ಪೂಜಾ ಪೋಷಕರಿಗೆ ಕಳುಹಿಸಿದ್ದರು. ಇತ್ತ ಪೂಜಾ ಮದುವೆಯಲ್ಲಿ ತೆಗೆದುಕೊಂಡಿದ್ದ ಫೋಟೋಗಳನ್ನ ನಂದಿನಿ ಪೋಷಕರಿಗೂ ತೋರಿಸಿದ್ದಾರೆ.

ತನ್ನ ರಹಸ್ಯ ಬಯಲಾಗುತ್ತಿದ್ದಂತೆ ಮರುದಿನ ನವೀನ್ ತನ್ನ ಪಟಾಲಂ ಜೊತೆ ಪರಾರಿಯಾಗಿದ್ದಾನೆ. ಪೂಜಾ ಪೋಷಕರು ನವೀನ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನವೀನ್ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *