ದೊಡ್ಡವರ ಫೋಟೋ ತೋರಿಸಿ ದೊಡ್ಡವರಿಗೆ ಕೋಟ್ಯಂತರ ವಂಚನೆ

– ಯುವರಾಜ್‌ ಸ್ವಾಮಿ ಮನೆ ಮೇಲೆ ಸಿಸಿಬಿ ರೇಡ್‌
– 16 ಲಕ್ಷ ನಗದು, ಚಿನ್ನಾಭರಣ ವಶ

ಬೆಂಗಳೂರು: ದೊಡ್ಡ ದೊಡ್ಡ ಹುದ್ದೆಗಳನ್ನು ಕೊಡಿಸೋದಾಗಿ ದೊಡ್ಡವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಯುವರಾಜ್ ಅಲಿಯಾಸ್ ಸ್ವಾಮಿ ಎಂಬಾತನ ಮನೆ ಮೇಲೆ ಸಿಸಿಬಿ ರೇಡ್ ಮಾಡಿದೆ.

ಬೆಂಗಳೂರಿನ ನಾಗರಭಾವಿಯಲ್ಲಿರುವ ಯುವರಾಜನ ನಾಲ್ಕಂತಸ್ತಿನ ಐಷಾರಾಮಿ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ, 10 ಗಂಟೆ ಶೋಧ ನಡೆಸಿ 90 ಕೋಟಿ ಮೌಲ್ಯದ ಚೆಕ್, 16 ಲಕ್ಷ ನಗದು, ಅಪಾರ ಚಿನ್ನಾಭರಣವನ್ನು ಸೀಜ್ ಮಾಡಿದೆ. ಅಲ್ಲದೇ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರ ನಕಲಿ ಖಾಲಿ ಲೆಟರ್‌ ಹೆಡ್‌, ನಕಲಿ ಸೀಲ್‍ಗಳನ್ನು ಸಿಸಿಬಿ ವಶಪಡಿಸಿಕೊಂಡಿದೆ.

ಈತ ಪ್ರಧಾನಿ ಅಮಿತ್ ಷಾ, ಜೆಪಿ ನಡ್ಡಾ, ಯಡಿಯೂರಪ್ಪ ಸೇರಿ ಘಟಾನುಘಟಿಗಳ ಜೊತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ತೋರಿಸಿ ನಿಮಗೆ ರಾಜ್ಯಪಾಲರ ಹುದ್ದೆ ಕೊಡಿಸ್ತೀನಿ. ರಾಜ್ಯ ಸಭಾ ಸ್ಥಾನ ಕೊಡಿಸ್ತೀನಿ. ಈ ಹುದ್ದೆ ಕೊಡಿಸ್ತೀನಿ ಎಂದು ಹೇಳಿ ಹಾಲಿ ಸಚಿವರು ಸೇರಿದಂತೆ ದೊಡ್ಡ ದೊಡ್ಡ ರಾಜಕಾರಣಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವಂಚಿಸಿದ್ದಾನೆ.

ಮಾಜಿ ರಾಜ್ಯಸಭಾ ಸದಸ್ಯರೊಬ್ಬರಿಗೆ 10 ಕೋಟಿ ರೂಪಾಯಿ ಮೋಸ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈತನ ಮಹಿಮೆ ಬಿಜೆಪಿ ಹೈಕಮಾಂಡ್‍ಗೂ ಮುಟ್ಟಿ, ಅಲ್ಲಿಂದ ಆದೇಶ ಸಿಕ್ಕ ನಂತರ ಸಿಸಿಬಿ ಈ ಕಾರ್ಯಾಚರಣೆ ನಡೆಸಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಸದ್ಯ ಸಿಸಿಬಿ ವಶದಲ್ಲಿರುವ ಯುವರಾಜ್‍ನನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿದೆ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಕೂತು ಈತ ಡೀಲ್ ಮಾಡುತ್ತಿದ್ದ ಅಂತ ತಿಳಿದುಬಂದಿದೆ .

Comments

Leave a Reply

Your email address will not be published. Required fields are marked *