ಬೆಳಗ್ಗೆ ಬಂದ್‍ಗೆ ಸಪೋರ್ಟ್, ಮಧ್ಯಾಹ್ನ ಬಿಲ್‍ಗೆ ಬೆಂಬಲ- ಮೇಲ್ಮನೆಯಲ್ಲಿ ಭೂಸುಧಾರಣೆ ಮಸೂದೆ ಪಾಸ್

– ಜೆಡಿಎಸ್ ಇಬ್ಬಗೆ ನೀತಿಗೆ ಆಕ್ರೋಶ

ಬೆಂಗಳೂರು: ಭಾರತ್ ಬಂದ್ ನಡುವೆಯೇ ವಿವಾದಾತ್ಮಕ ಭೂಸುಧಾರಣಾ ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ಪಾಸ್ ಆಗಿದೆ. ಸದನದ ಹೊರಗೆ ರೈತರ ಹೋರಾಟವನ್ನು ಬೆಂಬಲಿಸಿದ್ದ ಜೆಡಿಎಸ್, ಪರಿಷತ್‍ನಲ್ಲಿ ಮಾತ್ರ ವಿಧೇಯಕವನ್ನು ಇದ್ದಕ್ಕಿದ್ದಂತೆ ಬೆಂಬಲಿಸಿ ಅಚ್ಚರಿ ಮೂಡಿಸಿತು.

ಮರಿತಿಬ್ಬೇಗೌಡ ಹೊರತುಪಡಿಸಿ ಉಳಿದೆಲ್ಲಾ ಜೆಡಿಎಸ್ ಸದಸ್ಯರು ವಿಧೇಯಕದ ಪರವಾಗಿ ಎದ್ದು ನಿಂತು ಬೆಂಬಲ ಸೂಚಿಸಿದರು. ಇದನ್ನು ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ವಿಧೇಯಕದ ಪರ 37 ಮತ ಬಿದ್ದರೆ, ವಿರುದ್ಧ 21 ಮತ ಬಿದ್ದವು. ಜೆಡಿಎಸ್ ನಡೆ ಎಲ್ಲರನ್ನು ಅಚ್ಚರಿಯಲ್ಲಿ ಮುಳುಗಿಸಿತು. ಇದಕ್ಕೂ ಮುನ್ನ ಭೂಸುಧಾರಣೆ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಯಡಿಯೂರಪ್ಪ, ರೈತರಿಗೆ ನಾನಾಗಲಿ, ಮೋದಿಯವರಾಗಲಿ ರೈತರಿಗೆ ಅನ್ಯಾಯ ಮಾಡಲ್ಲ ಎಂಬ ಭರವಸೆ ನೀಡಿದರು.

ಸಿಎಂ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಕೆ ಹರಿಪ್ರಸಾದ್, ರೈತರ ವಿಚಾರದಲ್ಲಿ ಕೈ ಹಾಕಿ ಎಷ್ಟೊ ಸರ್ಕಾರಗಳು, ಸಂಸ್ಥಾನಗಳು ಬಿದ್ದು ಹೋಗಿವೆ ಎಂದು ಎಚ್ಚರಿಸಿದರು. ಬಿಜೆಪಿ ಯಾಕೆ ಈ ಕಾಯ್ದೆ ತರಲು ಇಷ್ಟು ಆತುರ ಪಡುತ್ತಿದೆ ಎಂದ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿಗೆ ಸಚಿವ ಅಶೋಕ್ ತಿರುಗೇಟು ನೀಡಿದರು.

ಈ ಕಾಯ್ದೆ ಬಾರದೇ ಹೋದ್ರೆ ಅಧಿಕಾರಿಗಳು ದುಡ್ಡು ಹೊಡೆಯುತ್ತಾರೆ ಅಂತ ಈ ಹಿಂದಿನ ಅಧಿವೇಶನದಲ್ಲಿ ಡಿಕೆಶಿ ಮಾತಾಡಿದ್ದಾರೆ. ನಿಮಗೇನು ಪ್ರಾಬ್ಲಂ ಅಂದ್ರು. ಅಶೋಕ್ ಮಾತಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ಅದು ಡಿಕೆ ಶಿವಕುಮಾರ್ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್ ಅಭಿಪ್ರಾಯ ಅಲ್ಲ ಅಂತಾ ಹರಿಪ್ರಸಾದ್ ಸ್ಪಷ್ಟನೆ ನೀಡೋಕೆ ಯತ್ನಿಸಿದರು. ಈ ವೇಳೆ ಗದ್ದಲ ಗಲಾಟೆ ನಡೀತು.

ಇನ್ನು ಬಿಲ್ ಪಾಸ್‍ಗೆ ರೈತ ಮುಖಂಡರು ಕಿಡಿಕಾರಿದ್ದಾರೆ. ಜೆಡಿಎಸ್‍ನವರು ಹೇಳೋದೊಂದು ಮಾಡೋದೊಂದು. ರೇವಣ್ಣ ಬಹಳ ಕುತಂತ್ರಿ. ಬೆಳಗ್ಗೆ ನಮ್ಮ ಜೊತೆ ಪ್ರತಿಭಟನೆಗೆ ಬರ್ತಾರೆ. ಮಧ್ಯಾಹ್ನ ಅಲ್ಲಿ ಹೋಗಿ ವಿಧೇಯಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ದ್ರೋಹ ಬಗೆದವರಿಗೆ ರೈತರೇ ಬುದ್ಧಿ ಕಲಿಸ್ತಾರೆ ಎಂದು ಕುರುಬೂರು ಶಾಂತ ಕುಮಾರ್ ಆಕ್ರೋಶ ಹೊರಹಾಕಿ ರಸ್ತೆ ತಡೆ ನಡೆಸಿದರು.

Comments

Leave a Reply

Your email address will not be published. Required fields are marked *