ವಧುವಿಗೆ ಕೊರೊನಾ – ಕೋವಿಡ್ ಸೆಂಟರಿನಲ್ಲೇ ಪಿಪಿಇ ಕಿಟ್ ಧರಿಸಿ ಮದ್ವೆಯಾದ ಜೋಡಿ

ಜೈಪುರ: ಮಹಾಮಾರಿ ಕೊರೊನಾ ವೈರಸ್ ನಿಂದ ಅನೇಕ ಸಭೆ- ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಸದ್ಯ ಮದುವೆ ಸಮಾರಂಭಗಳು ಕೊರೊನಾ ನಿಯಮದ ಪ್ರಕಾರವೇ ನಡೆಯುತ್ತಿದೆ. ಈ ಮಧ್ಯೆ ರಾಜಸ್ಥಾನದ ಕೋವಿಡ್ ಸೆಂಟರಿನಲ್ಲೇ ಪಿಪಿಯ ಕಿಟ್ ಧರಿಸಿ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಹೌದು. ರಾಜಸ್ಥಾನದ ಬಾರ ಎಂಬಲ್ಲಿ ಭಾನುವಾರ ಈ ಮದುವೆ ನಡೆದಿದೆ. ಮದುವೆ ದಿನದಂದೇ ವಧು ಕೊರೊನಾ ಟೆಸ್ಟ್ ಗೆ ಒಳಗಾದಾಗ ಆಕೆಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವಧು-ವರರು ಪಿಪಿಇ ಕಿಟ್ ಧರಿಸಿ ಸಪ್ತಪದಿ ತುಳಿದಿದ್ದಾರೆ.

ಮದುವೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಅರ್ಚಕ ಮತ್ತು ಓರ್ವ ವ್ಯಕ್ತಿ ಮಾತ್ರ ಇರುವುದನ್ನು ಕಾಣಬಹುದಾಗಿದೆ. ಕಾರ್ಯಕ್ರಮದಲ್ಲಿ ಕೊರೊನಾ ನಿಯಮವನ್ನು ಪಾಲಿಸಲಾಗಿದೆ. ಅಗ್ನಿ ಕುಂಡದ ಮುಂದೆ ವಧು-ವರರು ಪಿಪಿಇ ಕಿಟ್ ಧರಿಸಿ ಕುಳಿತಿದ್ದಾರೆ. ಅರ್ಚಕರು ಮಂತ್ರ ಹೇಳುವುದನ್ನು ಕೂಡ ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

https://twitter.com/kya_kroge_/status/1335622980336930816

ಸದ್ಯ ವೈರಲ್ ಆಗುತ್ತಿರುವ ವೀಡಿಯೋಗೆ ಸಾಕಷ್ಟು ಕಾಮೆಂಟ್ ಗಳು ಹಾಗೂ ಲೈಕ್ಸ್ ಗಳು ಬಂದಿವೆ. ಕಾಮೆಂಟ್ ಸೆಕ್ಷನ್ ನಲ್ಲಿ ಜನ ಹಲವಾರು ಮೀಮ್ಸ್ ಗಳನ್ನು ಮಾಡಿ ಹಾಕುತ್ತಿದ್ದಾರೆ.

ರಾಜಸ್ಥಾನದಲ್ಲಿ ಇದುವರೆಗೆ 2 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಭಾರತದಲ್ಲಿ 96 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

Comments

Leave a Reply

Your email address will not be published. Required fields are marked *