ಪತ್ನಿಯೊಂದಿಗೆ ಅಕ್ರಮ ಸಂಬಂಧ – ವ್ಯಕ್ತಿಯನ್ನು ರಾಡ್‍ನಿಂದ ಬಡಿದು ಕೊಂದ ಪತಿ

ರಾಯಚೂರು: ನಗರದ ಮಹಿಳಾ ಸಮಾಜ ಆವರಣದಲ್ಲಿನ ಪಾಳು ಕೋಣೆಯಲ್ಲಿ ಪತ್ತೆಯಾಗಿದ್ದ ಶವದ ಕೊಲೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಅನ್ನೋದು ಬಯಲಾಗಿದೆ.

ನವೆಂಬರ್ 30ರಂದು ದೇವನಪಲ್ಲಿಯ ಖಾಸಗಿ ಬ್ಯಾಂಕ್ ಉದ್ಯೋಗಿ 32 ವರ್ಷದ ಸೈಯದ್ ಇಮ್ರಾನ್ ಖಾದ್ರಿ ಶವವಾಗಿ ಪತ್ತೆಯಾಗಿದ್ದ. ಕೊಲೆ ಪ್ರಕರಣ ಆರೋಪಿ ರಾಯಚೂರಿನ ಬೈರೂನ್ ಕಿಲ್ಲಾ ನಿವಾಸಿ ಅಬ್ದುಲ್ ರಷೀದ್‍ನನ್ನ ಬಂಧಿಸಲಾಗಿದೆ. ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಅನುಮಾನದ ಮೇಲೆ ಆರೋಪಿಯನ್ನ ಬಂಧಿಸಿರುವ ಪೊಲೀಸರು ಸತ್ಯ ಬಾಯಿಬಿಡಿಸಿದ್ದಾರೆ.

ಸೈಯದ್ ಇಮ್ರಾನ್ ಖಾದ್ರಿ ಜೊತೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತ ಅಬ್ದುಲ್ ರಶೀದ್ ಅನುಮಾನಗೊಂಡಿದ್ದ. ಅಲ್ಲದೆ ತನ್ನಿಂದ ದೂರವಾಗಿರುವ ಪತ್ನಿ ಇಮ್ರಾನ್ ಕುಮ್ಮಕ್ಕಿನಿಂದ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ಹಿಂಸೆ ಹಾಗೂ ಜೀವನಾಂಶ ಪ್ರಕರಣ ದಾಖಲಿದ್ದಾಳೆ ಎಂದು ಸಿಟ್ಟಿನಿಂದ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊಲೆಯಾದ ಇಮ್ರಾನ್ ಸಹ ತನ್ನ ಪತ್ನಿಯಿಂದ ದೂರವಾಗಿದ್ದ, ವಿವಾಹ ವಿಚ್ಛೇದನ ಪ್ರಕರಣವೂ ನಡೆಯುತ್ತಿತ್ತು. ಹೀಗಾಗಿ ಕೊಲೆಯ ಹಿಂದೆ ಇಮ್ರಾನ್ ಪತ್ನಿ ಕಡೆಯವರ ಕೈವಾಡವಿದೆ ಅಂತ ಇಮ್ರಾನ್ ಕುಟುಂಬಸ್ಥರು ಆರೋಪಿಸಿದ್ದರು. ಆದರೆ ಪೊಲೀಸ್ ತನಿಖೆಯಲ್ಲಿ ಆರೋಪಿ ಅಬ್ದುಲ್ ರಶೀದ್ ಸಿಕ್ಕಿಬಿದ್ದಿದ್ದು, ತಪ್ಪೊಪ್ಪಿಕೊಂಡಿದ್ದಾನೆ.

ಸದರ ಬಜಾರ್ ಠಾಣಾ ಪೊಲೀಸರು ಘಟನೆ ನಡೆದು ಒಂದೇ ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಧಿಕಾರಿಗಳು ಅತೀ ಕಡಿಮೆ ಸಮಯದಲ್ಲಿ ಆರೋಪಿಯನ್ನು ಬಂಧಿಸಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್ ತನಿಖಾ ತಂಡವನ್ನು ಅಭಿನಂದಿಸಿದ್ದಾರೆ.

Comments

Leave a Reply

Your email address will not be published. Required fields are marked *