ಜನರ ಸಮಸ್ಯೆ ಕೇಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ- ಡಿಸಿ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

– ಜಿಲ್ಲಾಧಿಕಾರಿಗಳ ಕ್ರಮವನ್ನು ಬೆಂಬಲಿಸಬೇಕು

ಮೈಸೂರು: ಜನರ ಸಮಸ್ಯೆಗಳನ್ನು ಕೇಳಲು ಯಾವ ದೊಣ್ಣೆ ನಾಯಕನ ಅಪ್ಪನೆಯೂ ಬೇಕಿಲ್ಲ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವಿನ ಜಟಾಪಟಿ ಕುರಿತು ಮಾತನಾಡಿದ ಅವರು, ಕ್ಷೇತ್ರದ ಜನರ ಸಮಸ್ಯೆ ಕೇಳಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಯಾವ ಕ್ಷೇತ್ರವನ್ನೂ ಜನರು ಶಾಸಕ ಹಾಗೂ ಎಂಪಿಗೆ ಬರೆದುಕೊಟ್ಟಿರುವುದಿಲ್ಲ. ಶಾಸಕರು, ಸಂಸದರು ಎಂಬುದು ಜನರ ಕೆಲಸ ಮಾಡಲು ಇರುವ ಹುದ್ದೆ ಅಷ್ಟೇ. ಜಿಲ್ಲಾಧಿಕಾರಿ ಜನರ ಬಳಿಗೆ ಹೋಗಿ ಅವರ ಸಮಸ್ಯೆ ಕೇಳುತ್ತಿದ್ದಾರೆ. ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆ ಮುಗಿದ ಮೇಲೆ ನಾನೂ ಜನರ ಬಳಿ ಹೋಗುತ್ತೇನೆ. ಯಾರು ತಡೆಯುತ್ತಾರೆ ನೋಡೋಣ. ನಾಲ್ಕು ಜನ ಶಾಸಕರು ಒಟ್ಟಾಗಿ ಜಿಲ್ಲಾಧಿಕಾರಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಹೆದರಿಸುತ್ತಿದ್ದೀರಾ? ನೀವೂ ಹೆದರಿಸಿದರೆ ನಾವು ಹೆದರಬೇಕಾ? ನೀವೇ ಜನರ ಸಮಸ್ಯೆ ಬಗೆಹರಿಸಿದ್ದರೆ ಜನರು ಜಿಲ್ಲಾಧಿಕಾರಿ ಬಳಿ ಯಾಕೆ ಕಷ್ಟ ಹೇಳಿಕೊಳ್ಳುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

ನೀವು ಮಾಡಲು ಆಗದ ಕೆಲಸವನ್ನು ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ, ಮಾಡಲು ಬಿಡಿ. ಮೊದಲು ಶಾಸಕರ ಹಕ್ಕು ಚ್ಯುತಿ ಕುರಿತು ಪುಸ್ತಕ ಓದಿಕೊಳ್ಳಿ. ಮೂರ್ನಾಲ್ಕು ಬಾರಿ ಶಾಸಕರು ಆದವರು ನೀವು. ಯಾವುದು ಹಕ್ಕು ಚ್ಯುತಿ ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಖಾರವಾಗಿ ಶಾಸಕರನ್ನು ಪ್ರಶ್ನಿಸಿದ್ದಾರೆ.

ಜನರ ಸಮಸ್ಯೆ ಕೇಳುವ ಸಭೆಯಲ್ಲಿ ನಿಮ್ಮನ್ನು ಗದ್ದುಗೆ ಮೇಲೆ ಕೂರಿಸದಿದ್ದರೆ ಅದು ಹಕ್ಕು ಚ್ಯುತಿಯಾ? ಡಿಸಿಗಳು ಜನರ ಬಳಿ ಹೋಗಿ ಕೆಲಸ ಮಾಡಬೇಕು. ಆ ಕೆಲಸವನ್ನು ಅವರು ಮಾಡುತ್ತಿದ್ದಾರೆ’ ಅವರಿಗೆ ಜನರ ಕೆಲಸ ಮಾಡಲು ಬಿಡಿ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *