ಉದ್ಧವ್ ಕೊರೊನಾ ನಿಭಾಯಿಸಿದ ರೀತಿ ಕಂಡು, ಪ್ರಭಾವಿತಳಾಗಿ ಶಿವ ಸೇನೆ ಸೇರಿದೆ: ಊರ್ಮಿಳಾ

ಮುಂಬೈ: ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ತೊರೆದು ಶಿವ ಸೇನೆ ಸೇರಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೊರೊನಾ ಸಂಕಷ್ಟವನ್ನು ನಿಭಾಯಿಸಿದ ರೀತಿಯನ್ನು ಕಂಡು, ಪ್ರಭಾವಿತಳಾಗಿ ಶಿವ ಸೇನೆ ಸೇರುತ್ತಿದ್ದೇನೆ ಎಂದು ಈ ವೇಳೆ ಊರ್ಮಿಳಾ ತಿಳಿಸಿದ್ದಾರೆ.

ಶಿವ ಸೇನೆ ಸೇರಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವರ್ಷ ಮಹಾರಾಷ್ಟ್ರಕ್ಕೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅತ್ಯದ್ಭುತ ಕೆಲಸ ಮಾಡಿದ್ದಾರೆ. ಅವರ ಕೆಲಸದಿಂದ ನಾನು ಪ್ರಭಾವಿತಳಾಗಿದ್ದೇನೆ. ಅಲ್ಲದೆ ಅವರೊಂದಿಗೆ ಕೆಲಸ ಮಾಡಬೇಕು ಎಂಬ ಹಂಬಲ ಹೊಂದಿದ್ದೇನೆ ಎಂದರು.

ವಿಧಾನ ಪರಿಷತ್ ನಾಮನಿರ್ದೇಶನದ ಕುರಿತು ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯತ್ವ ಸ್ಥಾನದ ಕುರಿತು ಮಾತನಾಡುವಾಗ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಶಾಸಕಾಂಗಕ್ಕೆ ಸಂಸ್ಕøತಿ ಹಾಗೂ ಕಲೆಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದರು. ಇದನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ನಾನು ಮರಾಠಿ ಕುಟುಂಬದಿಂದ ಬಂದವಳು. ಅಲ್ಲದೆ ನಾನು ಮೀಡಿಯಾ ಮೇಡ್ ಸ್ಟಾರ್ ಅಲ್ಲ, ಪೀಪಲ್ ಮೇಡ್ ಸ್ಟಾರ್ ಎಂದು ತಿಳಿಸಿದರು.

46 ವರ್ಷದ ನಟಿ ಊರ್ಮಿಳಾ ಕಳೆದ ವರ್ಷ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಇದೇ ವೇಲೆ ಸ್ಪಷ್ಟಪಡಿಸಿದ್ದಾರೆ.

ಇಂದು ಬೆಳಗ್ಗೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಅವರ ಮಾತೋಶ್ರೀ ನಿವಾಸದಲ್ಲಿ ಶಿವ ಸೇನೆಗೆ ಸೇರ್ಪಡೆಯಾಗಿದ್ದಾರೆ. ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಅವರು ‘ಶಿವ ಬಂಧನ’ ಕಟ್ಟುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *