ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಎನ್. ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣವನ್ನು ತನಿಖೆಗೆ ಕೊಡದಿದ್ದರೆ ನಾವು ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ಸುಲಭವಾದ್ದದ್ದಲ್ಲ. ಸಂತೋಷ್ ಆತ್ಮಹತ್ಯೆ ಪ್ರಯತ್ನದ ಹಿಂದೆ ರಾಜಕೀಯ ಒತ್ತಡವಿದೆ. ಈಗಾಗಲೇ ಸಾಕಷ್ಟು ಮಾಹಿತಿಗಳು ಹರಿದುಬರುತ್ತವೆ ಎಂದು ಹೇಳಿದ್ದಾರೆ.

ಯಾವುದೋ ಸಿಡಿಯಿಂದಾಗಿ ಈ ರೀತಿಯಾಗಿದೆಯಂತೆ. ಇದರ ಬಗ್ಗೆ ವಿಶೇಷ ತಂಡದಿಂದ ತನಿಖೆಯಾಗಬೇಕು. ಸರ್ಕಾರ ಕೂಡಲೇ ತನಿಖೆಗೊಳಪಡಿಸಬೇಕು. ಅದರ ಹಿಂದಿರುವ ಸತ್ಯಾಂಶ ಹೊರಬರಬೇಕು. ತನಿಖೆಗೆ ಕೊಡದೇ ಹೋದರೆ ತಪ್ಪು ಸಾಬೀತಾದಂತೆ ಎಂದು ತಿಳಿಸಿದರು.
ಒಂದು ವೇಳೆ ತನಿಖೆಗೆ ಕೊಡದಿದ್ದರೆ ನಾವು ಹೋರಾಟ ಹಮ್ಮಿಕೊಳ್ಳುತ್ತೇವೆ. ನಮ್ಮ ನಾಯಕರ ಜೊತೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ. ಪ್ರಕರಣವನ್ನ ಮುಚ್ಚುವ ಪ್ರಯತ್ನ ಮಾಡಬಾರದು ಎಂದು ಸಲೀಂ ತನಿಖೆಗೆ ಆಗ್ರಹಿಸಿದರು. ಇದನ್ನೂ ಓದಿ: ಅವನ್ಯಾರೋ ಸತ್ರೆ ನನಗೆ ಯಾಕೆ ಪ್ರಶ್ನೆ: ಈಶ್ವರಪ್ಪ

ಸಂತೋಷ್ ಅವರು ನಿನ್ನೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಕುಟುಂಬಸ್ಥರು ನಗರದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇಂದು ಬೆಳಗ್ಗೆ ಸಂತೋಷ್ ಆರೋಗ್ಯ ಸಂಬಂಧ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಆಸ್ಪತ್ರೆ ವೈದ್ಯರು, ನಿದ್ದೆ ಮಂಪರಿನಲ್ಲೇ ಇರುವ ಸಂತೋಷ್ ಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ನಿನ್ನೆ ರಾತ್ರಿಗಿಂತ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆಯಾಗಿದೆ. ಡಿಸ್ಚಾರ್ಜ್ ಮಾಡುವ ಬಗ್ಗೆ ಯಾವುದೇ ನಿರ್ಧಾರವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೌಟುಂಬಿಕವಾಗಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಂತೋಷ್ ಪತ್ನಿ

ಸಂತೋಷ್ ಅವರನ್ನು ನಿನ್ನೆ ರಾತ್ರಿ 8.30ರ ಸುಮಾರಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಮಧ್ಯಾಹ್ನ ನಂತರ ಜನರಲ್ ವಾರ್ಡಿಗೆ ಶಿಫ್ಟ್ ಮಾಡುತ್ತೇವೆ. ಅವರು ನಿನ್ನೆ ಬಂದಾಗ ಸ್ವಲ್ಪ ಮಂಕಾಗಿದ್ದರು. ಬೇರೆ ಯಾವುದೇ ಸಮಸ್ಯೆ ಇಲ್ಲ. ಎಷ್ಟು ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡಿದ್ದರು ಅಂತ ಹೇಳೋಕೆ ಆಗಲ್ಲ ಎಂದು ನುಡಿದರು.
ಆತ್ಮಹತ್ಯೆಗೆ ಯತ್ನ ಮಾಡಿರುವ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 309ರ ಅಡಿಯಲ್ಲಿ ಸಂತೋಷ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಸಂತೋಷ್ ಪರ್ಸನಲ್ ವೀಡಿಯೋ ದೆಹಲಿ ತಲುಪಿರುವ ಮಾಹಿತಿ ಇತ್ತು: ಡಿಕೆಶಿ

Leave a Reply