1 ಲಕ್ಷ ರೂ. ಸಾಲ ತೀರಿಸಲು 6 ತಿಂಗಳ ಮಗು ಮಾರಿದ ಅಪ್ಪ

– ಪೊಲೀಸರಿಗೆ ದೂರು ನೀಡಿದ ಸಂಬಂಧಿಗಳು
– ಮೂವರಿಗೆ ನ್ಯಾಯಾಂಗ ಬಂಧನ

ಚೆನ್ನೈ: ಸಾಲ ತೀರಿಸಲು ಹಣವಿಲ್ಲದೆ 6 ತಿಂಗಳ ಮಗುವನ್ನು ತಂದೆ 1 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಸೇಲಂನ ಲಿನೆಮೇಡನಲ್ಲಿ ನಡೆದಿದೆ.

ಸಾಲ ತೀರಿಸಲು ಹಣವಿಲ್ಲದೆ ಇರುವಾಗ ತಂದೆಯೇ ತನ್ನ 6 ತಿಂಗಳ ಮಗುವನ್ನು ಒಂದು ಲಕ್ಷರೂಪಾಯಿಗೆ ಮಾರಿದ್ದಾನೆ. ಆರೋಪಿ ತಂದೆಯನ್ನು ಸೌಕತ್ ಆಲಿ ಎಂದು ಗುರುತಿಸಲಾಗಿದೆ. ಈತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಸೌಕತ್‍ನ ಗೆಳೆಯ ಸೆಡ್ಡು ಹಾಗೂ ಮಗುವನ್ನು ಖರೀದಿಸಿದ ಸುಂದರಮ್ ಮಗು ಮಾರಾಟದಲ್ಲಿ ಶಾಮಿಲಾಗಿದ್ದಾರೆ.

ಮಗುವನ್ನು ಮಾರಾಟ ಮಾಡಿದ್ದು ಯಾಕೆ..?:
6 ತಿಂಗಳ ಹಿಂದೆ ಸೌಕತ್ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಪತ್ನಿಯ ಕುಟುಂಬದವರು ಮಗುವನ್ನು ನೋಡಲು ಮನೆಗೆ ಬಂದಿದ್ದರು. ಆದರೆ ಮಗು ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಸೌಕತ್ ಆಲಿಯ ಬಳಿ ಸಂಬಂಧಿಕರು ಪ್ರಶ್ನೆ ಮಾಡಿದ್ದಾರೆ. ಈತ ಮಗು ತೀರಿ ಹೋಗಿದೆ ಎಂದು ಕಥೆಯನ್ನು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಸಂಬಂಧಿಗಳು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸೌಕತ್ ಆಲಿಯನ್ನು ವಿಚಾರಣೆ ಮಾಡಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಆಲಿಗೆ ಯಾವುದೇ ಕೆಲಸ ಇರಲಿಲ್ಲ. ಹಾಗಾಗಿ ಸಾಲ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದನು. ಆಗ ಸೌಕತ್ ಮಕ್ಕಳಿಲ್ಲದ ಸುಂದರಮ್ ಎಂಬವರಿಗೆ 1ಕ್ಷ ರೂ.ಗೆ ಮಗುವನ್ನು ಮಾರಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಮಗುವನ್ನು ಪೊಲೀಸರು ಸುಂದರಂ ಮನೆಯಿಂದ ವಶಪಡಿಸಿಕೊಂಡು ಆಲಿಯ ಪತ್ನಿಗೆ ಹಸ್ತಾಂತರಿಸಿದ್ದಾರೆ. ಮಗುವಿನ ಮಾರಾಟದಲ್ಲಿ ಶಾಮಿಲಾಗಿರುವ ಮೂವರು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments

Leave a Reply

Your email address will not be published. Required fields are marked *