ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 24 ಕೆ.ಜಿ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾದ ವೈದ್ಯರು

ಲಕ್ನೋ: ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಬರೋಬ್ಬರಿ 24 ಕೆ.ಜಿ ಗಡ್ಡೆ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾದ ಘಟನೆ ಉತ್ತರಪ್ರದೇಶದ ಆಲಿಘರ್ ನಲ್ಲಿ ನಡೆದಿದೆ.

ಆಲಿಘರ್ ಜಿಲ್ಲೆಯ ಚಾರ್ರಾ ನಿವಾಸಿ ಸೀತಾರಾಮ್(45) ಸುಮಾರು ಒಂದೂವರೆ ವರ್ಷಗಳಿಂದ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿತ್ತು. ಆಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ(ಎಎಂಯು), ಜವಾಹರ್‍ಲಾಲ್ ನೆಹರು ವೈದ್ಯಕೀಯ ಕಾಲೇಜಿನ (ಜೆಎನ್‍ಎಂಸಿ) ವೈದ್ಯರು ರೋಗಿಯ ಹೊಟ್ಟೆಯಿಂದ ಗಡ್ಡೆ ಹೊರತೆಗೆದಿದ್ದಾರೆ.

ಪ್ರೊ. ಸೈಯದ್ ಹಸನ್ ಹ್ಯಾರಿಸ್ (ಶಸ್ತ್ರ ಚಿಕಿತ್ಸಾ ವಿಭಾಗ) ಅವರ ಮೇಲ್ವಿಚಾರಣೆಯಲ್ಲಿ ಡಾ. ಶಹಬಾಜ್ ಹಬೀಬ್ ಫರಿಡಿ ನೇತೃತ್ವದ ಶಸ್ತ್ರಚಿಕಿತ್ಸಕರ ತಂಡ ಈ ಗಡ್ಡೆಯನ್ನು ಹೊಟ್ಟೆಯಿಂದ ತೆಗೆಯುವಲ್ಲಿ ಸೈ ಎನಿಸಿಕೊಂಡಿದೆ.

ಈ ಸಂಬಂಧ ಪ್ರೊ. ಹಸನ್ ಹ್ಯಾರಿಸ್ ಮಾತನಾಡಿ, ಸಿತಾರಾಮ್ ಅವರು 2018ರಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಯಾಕೆ ಈ ರೀತಿ ಆಗುತ್ತಿದೆ ಎಂದು ತಿಳಿದರಿರಲಿಲ್ಲ. ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿರುವ ಬಗ್ಗೆ ಹೇಳಿದರು. ಅಲ್ಲದೆ ಹೊಟ್ಟೆ ನೋವಿಗೆಂದು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದು, ಆಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ನೋವು ಹೋಗುತ್ತಿತ್ತು ಎಂದು ತಿಳಿಸಿರುವುದಾಗಿ ಹೇಳಿದರು.

ಸೀತಾರಾಮ್ ಅವರು ಉತ್ತರಪ್ರದೇಶ ಮತ್ತು ದೆಹಲಿಯ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇನ್ನು ಖಾಸಗಿ ಆಸ್ಪತ್ರೆಗೆ ತೆರಳಿದರೆ ಅಲ್ಲಿ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದರು ಎಂದು ವೈದ್ಯರು ತಿಳಿಸಿದರು. ಕೊನೆಗೆ ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ಬಳಿಕ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಸದ್ಯ ಸೀತಾರಾಮ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.

Comments

Leave a Reply

Your email address will not be published. Required fields are marked *