ನಿತೀಶ್ ಕುಮಾರ್ ಕೊರಳಿಗೆ ಬಿ’ಹಾರ’ – ಸೋಮವಾರ ಪದಗ್ರಹಣ

– ನಾಳೆ 7ನೇ ಬಾರಿ ಸಿಎಂ ಆಗಿ ನಿತೀಶ್ ಪ್ರಮಾಣ ವಚನ ಸ್ವೀಕಾರ

ಪಾಟ್ನಾ: ನಿತೀಶ್ ಕುಮಾರ್ ಮತ್ತೊಮ್ಮೆ ಬಿಹಾರದ ಸಿಎಂ ಪಟ್ಟವನ್ನೇರಲಿದ್ದಾರೆ. ಇಂದು ನಡೆದ ಎನ್‍ಡಿಎ ಕೂಟದ ಸಭೆಯಲ್ಲಿ ಶಾಸಕಾಂಗ ಸಭೆಯ ನಾಯಕ ಮತ್ತು ಸಿಎಂ ಆಗಿ ನಿತೀಶ್ ಕುಮಾರ್ ಅವರನ್ನ ಆಯ್ಕೆ ಮಾಡಲಾಗಿದೆ.

ಸೋಮವಾರ ಸಂಜೆ 4 ಗಂಟೆಗೆ ರಾಜಭವನದಲ್ಲಿ ನಿತೀಶ್ ಕುಮಾರ್ ಏಳನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಜೆಡಿಯುಗಿಂದ ಬಿಜೆಪಿ ಹೆಚ್ಚು ಸ್ಥಾನದಲ್ಲಿ ಜಯಭೇರಿ ಬಾರಿಸಿದ್ದರಿಂದ ಸಿಎಂ ಯಾರಾಗ್ತಾರೆ ಅನ್ನೋದರ ಬಗ್ಗೆ ತೀವ್ರ ಕುತೂಹಲ ಉಂಟಾಗಿತ್ತು.

ಇಂದು ನಡೆದ ಬೈಟೆಕ್ ನಲ್ಲಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ಬಿಹಾರ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಮತ್ತು ಬಿಹಾರ ಬಿಜೆಪಿ ಪ್ರಮುಖ ಭೂಪೇಂದ್ರ ಯಾದವ್ ಉಪಸ್ಥಿತರಿದ್ದರು. ಆದ್ರೆ ಉಪ ಮುಖ್ಯಮಂತ್ರಿ ಹೆಸರನ್ನ ಎನ್‍ಡಿಎ ಘೋಷಣೆ ಮಾಡಿಲ್ಲ.

ಉಪಮುಖ್ಯಮಂತ್ರಿ ರೇಸ್ ನಲ್ಲಿ ಸುಶೀಲ್ ಮೋದಿ ಹೆಸರು ಮುನ್ನಲೆಗೆ ಬಂದಿತ್ತು. ಆದ್ರೆ ಈ ಬಗ್ಗೆ ಬಿಜೆಪಿ ನಿರ್ಣಯ ತೆಗೆದುಕೊಂಡಿಲ್ಲ. ಬದಲಾಗಿ ಸುಶೀಲ್ ಮೋದಿ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲು ಬಿಜೆಪಿ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಬೈಟೆಕ್ ಬಳಿಕ ರಾಜ್ಯಪಾಲ ಫಾಗೂ ಚೌಹಾಣ್ ಅವರನ್ನ ಭೇಟಿಯಾಗಿರುವ ನಿತೀಶ್ ಕುಮಾರ್ ಸರ್ಕಾರ ರಚನೆಯ ಅನುಮತಿ ಕೇಳಿದ್ದಾರೆ.

ಬಿಹಾರ ಚುನಾವಣೆ ಫಲಿತಾಂಶ: 50:50 ಅನುಪಾತದಲ್ಲಿ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿದ್ದ ನಿತೀಶ್ ಕುಮಾರ್ ಕೇವಲ 43 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ 74ರಲ್ಲಿ ವಿಜಯ ಪತಾಕೆ ಹಾರಿಸಿದ್ದು, ಎನ್‍ಡಿಎ ಕೂಟದ ವಿಐಪಿ ಮತ್ತು ಹೆಚ್‍ಎಎಂ ತಲಾ ನಾಲ್ಕರಲ್ಲಿ ಗೆದ್ದಿವೆ. 243ರ ಪೈಕಿ ಎನ್‍ಡಿಎ 125 ಸ್ಥಾನಗಳನ್ನ ಗೆಲ್ಲುವ ಮೂಲಕ ಬಹುಮತವನ್ನ ಪಡೆದುಕೊಂಡಿದೆ.

ಮಹಾಘಟಬಂಧನದ ಆರ್ ಜೆಡಿ 75, ಕಾಂಗ್ರೆಸ್ 19, ಸಿಪಿಐ ಎಂಎಲ್ 12, ಸಿಪಿಐ ಮತ್ತು ಸಿಪಿಎಂ ತಲಾ ಎರಡರಲ್ಲಿ ಗೆದ್ದಿವೆ. ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ 5 ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‍ಜೆಪಿ ಒಂದು ಕ್ಷೇತ್ರದಲ್ಲಿ ಗೆದ್ದಿದೆ.

Comments

Leave a Reply

Your email address will not be published. Required fields are marked *