ನಿಮ್ಮೊಂದಿಗೆ ಆಚರಿಸಿದ್ರೆ ಮಾತ್ರ ದೀಪಾವಳಿ ಪರಿಪೂರ್ಣ- ಸೈನಿಕರ ಬಗ್ಗೆ ಮೋದಿ ಭಾವನಾತ್ಮಕ ಮಾತು

– ಚೀನಾಗೆ ಟಾಂಗ್, ಶತ್ರು ರಾಷ್ಟ್ರಗಳ ವಿರುದ್ಧ ಗಡಿಯಲ್ಲಿ ಮೋದಿ ಗುಡುಗು

ನವದೆಹಲಿ: ನಿಮ್ಮೊಂದಿಗೆ ಆಚರಿಸಿದಾಗ ಮಾತ್ರ ನನ್ನ ದೀಪಾವಳಿ ಹಬ್ಬ ಪರಿಪೂರ್ಣವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ದೀಪಾವಳಿ ಹಿನ್ನೆಲೆ ಶನಿವಾರ ರಾಜಸ್ಥಾನದ ಜೈಸಲ್ಮೇರ್‍ಗೆ ಮೋದಿ ಭೇಟಿ ನೀಡಿದ್ದು, ಗಡಿಯಲ್ಲಿರುವ ಭಾರತೀಯ ಸೈನಿಕರೊಂದಿಗೆ ದೀಪವಾಳಿ ಆಚರಿಸಿದ್ದಾರೆ. ಈ ಮೂಲಕ ಸತತ ಏಳನೇ ಬಾರಿ ಪ್ರಧಾನಿ ಮೋದಿಯವರು ಭಾರತೀಯ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ರಕ್ಷಣಾ ಪಡೆಯ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್, ಸೇನೆಯ ಮುಖ್ಯಸ್ಥ ಎಂ.ಎಂ.ನಾರವಾನೆ ಹಾಗೂ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಪ್ರಧಾನ ನಿರ್ದೇಶಕ ರಾಕೇಶ್ ಅಸ್ಥನಾ ಅವರು ಸಹ ಪ್ರಧಾನಿ ನರೇಂದ್ರ ಮೋದಿಯರಿಗೆ ಸಾಥ್ ನೀಡಿದರು.

ಲೋಂಗವಾಲಾದಲ್ಲಿ ಸೈನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದೀಪಾವಳಿಯ ಶುಭಾಶಯ ತಿಳಿಸಿ, ದೇಶದ ಪ್ರತಿಯೊಬ್ಬರ ಪರವಾಗಿ ಶುಭ ಕೋರುವುದಾಗಿ ತಿಳಿಸಿದ್ದಾರೆ. ನೀವು ಇರುವವರೆಗೆ ಈ ದೇಶದ ದೀಪಾವಳಿ ಆಚರಣೆ ಸಂಪೂರ್ಣ ಸಂಭ್ರಮದಿಂದ ಕೂಡಿರುತ್ತದೆ. ಪ್ರಕಾಶಮಾನವಾಗಿರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೀಪಗಳನ್ನು ಬೆಳಗಿಸಿ ಯೋಧರಿಗೆ ಕೃತಜ್ಞತೆ ಸಲ್ಲಿಸೋಣ: ಮೋದಿ

ಹಿಮದಿಂದ ಆವರಿಸಿದ ಪರ್ವತಗಳಲ್ಲಿ ಅಥವಾ ಮರುಭೂಮಿಯಲ್ಲಿ ನೀವು ಇರುತ್ತೀರಿ. ನಿಮ್ಮ ಬಳಿ ಬಂದು ಹಬ್ಬ ಆಚರಿಸಿದಾಗಲೇ ನನ್ನ ದೀಪಾವಳಿ ಪರಿಪೂರ್ಣವಾಗುತ್ತದೆ. ನಿಮ್ಮ ಮುಖದಲ್ಲಿನ ಸಂತಸವನ್ನು ಕಂಡಾಗಲೇ ನನ್ನ ಮುಖದಲ್ಲಿ ನಗು ದ್ವಿಗುಣವಾಗುತ್ತದೆ ಎಂದಿದ್ದಾರೆ.

ಹಿಮಾಲಯದ ಶಿಖರಗಳು, ವಿಸ್ತಾರವಾದ ಮರುಭೂಮಿ, ದಟ್ಟ ಕಾನನ ಅಥವಾ ಸಮುದ್ರಗಳ ಆಳವಾಗಿರಲಿ. ಎಂತಹ ಸವಾಲಿನ ಸಂದರ್ಭದಲ್ಲಿಯೂ ನಿಮ್ಮ ಶೌರ್ಯ ಜಯ ಸಾಧಿಸಿದೆ. ಸೈನಿಕರ ಉತ್ಕøಷ್ಟತೆ ಇತಿಹಾಸವನ್ನು ಬರೆದು, ಓದಿದಾಗೆಲ್ಲ ಲಾಂಗ್‍ವಾಲಾ ಕದನ ನೆನಪಿಗೆ ಬರುತ್ತದೆ ಎಂದು ಸೈನಿಕರ ಶೌರ್ಯವನ್ನು ಹಾಡಿ ಹೊಗಳಿದ್ದಾರೆ. ದೇಶದ 130 ಕೋಟಿ ಭಾರತೀಯರು ನಿಮ್ಮೊಂದಿಗಿದ್ದಾರೆ. ನಮ್ಮ ಸೈನಿಕರ ಶಕ್ತಿ ಹಾಗೂ ಶೌರ್ಯದ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುತ್ತಾನೆ. ನಮ್ಮ ದೇಶದ ಗಡಿಯನ್ನು ರಕ್ಷಿಸುವಲ್ಲಿ ಧೈರ್ಯಶಾಲಿ ಸೈನಿಕರನ್ನು ತಡೆಯಲು ವಿಶ್ವದ ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ವೇಗವಾಗಿ ಸಾಗುತ್ತಿದೆ. ಈ ಮೂಲಕ ರಕ್ಷಣಾ ವಲಯವನ್ನು ಆತ್ಮನಿರ್ಭರವಾಗಿಸಲಾಗುತ್ತಿದೆ. ಸ್ಥಳೀಯ ಶಸ್ತ್ರಾಸ್ತ್ರ ಕಾರ್ಖಾನೆಗಳತ್ತ ಗಲನಹರಿಸಲು ನಾವು ನಿರ್ಧರಿಸಿದ್ದೇವೆ. ಈ ರಕ್ಷಣಾ ವಲಯದ ಈ ಒಂದು ನಿರ್ಧಾರದಿಂದಾಗಿ 130 ಕೋಟಿ ಭಾರತೀಯರನ್ನು ವೋಕಲ್ ಫಾರ್ ಲೋಕಲ್ ಸಿದ್ಧಾಂತಕ್ಕೆ ಪ್ರೇರೇಪಿಸಿದೆ ಎಂದು ತಿಳಿಸಿದರು.

ಚಿನಾ ವಿರುದ್ಧ ವಾಗ್ದಾಳಿ:
ವಿಸ್ತರಣಾವಾದಿ ಶಕ್ತಿಗಳಿಂದ ಇಂದು ಇಡೀ ಜಗತ್ತು ತೊಂದರೆಗೀಡಾಗಿದೆ. ವಿಸ್ತರಣಾವಾದವು ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಾಗಿದೆ. ಅಲ್ಲದೆ 18ನೇ ಶತಮಾನದ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ. ಈ ಚಿಂತನೆಯ ವಿರುದ್ಧ ಭಾರತ ಬಲವಾಗಿ ಧ್ವನಿ ಎತ್ತಿದೆ. ಯಾವುದೇ ಸಂದರ್ಭದಲ್ಲಿ ಭಾರತ ತನ್ನ ಸ್ವಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಈಗ ಜಗತ್ತು ಅರಿತಿದೆ ಎಂದು ಪರೋಕ್ಷವಾಗಿ ಚೀನಾಗೆ ಪ್ರಧಾನಿ ಮೋದಿ ಟಾಂಗ್ ನೀಡಿದರು.

ನಿಮ್ಮ ಶಕ್ತಿ ಹಾಗೂ ಶೌರ್ಯದಿಂದ ಭಾರತದ ಖ್ಯಾತಿ ಮತ್ತು ನಿಲುವು ಹೆಚ್ಚಿದೆ. ಭಾರತ ಇಂದು ಅಂತರಾಷ್ಟ್ರೀಯ ವೇದಿಕೆಗಳ ಬಗ್ಗೆ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸುತ್ತಿದೆ. ಇದಕ್ಕೆ ಕಾರಣ ನೀವು ರಾಷ್ಟ್ರವನ್ನು ಭದ್ರಪಡಿಸಿರುವುದು ಎಂದು ಜೈಸಲ್ಮೇರ್ ನಲ್ಲಿ ಪ್ರಧಾನಿ ಗುಡುಗಿದ್ದಾರೆ.

ಭಾರತದ ತಂತ್ರ ಸ್ಪಷ್ಟವಾಗಿದೆ. ಇಂದಿನ ಭಾರತ ಇತರರನ್ನು ಅರ್ಥಮಾಡಿಕೊಳ್ಳುತ್ತದೆ. ಅಲ್ಲದೆ ನಮ್ಮನ್ನು ಇತರರು ಅರ್ಥಮಾಡಿಕೊಳ್ಳುವ ನೀತಿಯನ್ನು ನಂಬುತ್ತದೆ. ಆದರೆ ನಮ್ಮನ್ನು ಪರೀಕ್ಷಿಸಲು ಯತ್ನಿಸಿದರೆ ತಕ್ಕ ಉತ್ತರ ನೀಡಲೂ ಹಿಂಜರಿಯುವುದಿಲ್ಲ ಎಂದು ಮೋದಿ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *