20 ವರ್ಷ ಪಾಕ್ ಜೈಲಿನಲ್ಲಿದ್ದು ಬಿಡುಗಡೆಯಾದ- ಊರಲ್ಲಿ ಹಬ್ಬದ ವಾತಾವರಣ, ಅದ್ಧೂರಿ ಸ್ವಾಗತ

– ಹಾಡು, ಡ್ಯಾನ್ಸ್ ಮೂಲಕ ಬರಮಾಡಿಕೊಂಡರು
– ಸರ್ಕಾರದ ಸೌಲಭ್ಯ ಕೊಡಿಸುವ ಭರವಸೆ ನೀಡಿದ ಅಧಿಕಾರಿ

ಭುವನೇಶ್ವರ: ಅಚಾನಕ್ಕಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿ ಸೆರೆಯಾಗಿದ್ದ ಒಡಿಶಾ ಮೂಲದ ವ್ಯಕ್ತಿಯನ್ನು ಪಾಕ್ 20 ವರ್ಷ ಜೈಲಿನಲ್ಲಿಟ್ಟಿದ್ದು, ಇದೀಗ ಆತ ಬಿಡುಗಡೆಯಾಗಿದ್ದಾನೆ. 20 ವರ್ಷದ ಬಳಿಕ ಗ್ರಾಮಕ್ಕೆ ಆಗಮಿಸಿದ್ದಕ್ಕೆ ಸ್ಥಳೀಯರು ಭರ್ಜರಿ ಸ್ವಾಗತ ಕೋರಿದ್ದಾರೆ.

ಒಡಿಶಾದ ಸುಂದರಗಡ ಜಿಲ್ಲೆಯ 50 ವರ್ಷದ ಬಿರ್ಜು ಕುಲ್ಲು ಶುಕ್ರವಾರ ತನ್ನ ಗ್ರಾಮ ಜಂಗತೇಲಿಗೆ ಆಗಮಿಸಿದ್ದು, ನೂರಾರು ಸ್ಥಳೀಯರು ಸೇರಿ ಸಾಂಗ್ ಹಾಕಿ, ಡ್ಯಾನ್ಸ್ ಮಾಡಿ ವ್ಯಕ್ತಿಯನ್ನು ತಮ್ಮ ಊರಿಗೆ ಸ್ವಾಗತಿಸಿದ್ದಾರೆ. ಅಚಾನಕ್ಕಾಗಿ ವ್ಯಕ್ತಿ ಪಾಕಿಸ್ತಾನ ಗಡಿ ಪ್ರವೇಶಿಸಿದ್ದು, ಈ ವೇಳೆ ಅನುಮಾನಗೊಂಡ ಪಾಕಿಸ್ತಾನದವರು ಭಾರತದ ಗುಪ್ತಚರ ದಳದವರಿರಬೇಕು ಎಂದು ಬಂಧಿಸಿತ್ತು. ನಂತರ ಬಿರ್ಜು 20 ವರ್ಷ ಪಾಕಿಸ್ತಾನ ಜೈಲಿನಲ್ಲೇ ಕಾಲ ಕಳೆಯಬೇಕಾಯಿತು.

ಬಿರ್ಜು ಮಾನಸಿಕ ಅಸ್ವಸ್ಥ ಎನ್ನಲಾಗಿದ್ದು, ಸುಮಾರು 25 ವರ್ಷಗಳ ಹಿಂದೆ ಕಾಣೆಯಾಗಿದ್ದ. ಬಳಿಕ ಪಾಕ್ ಗಡಿ ಪ್ರವೇಶಿಸಿದ್ದು, ಈ ವೇಳೆ ಭಾರತದ ಗುಪ್ತಚರ ದಳದವನಿರಬೇಕೆಂದು ಪಾಕಿಸ್ತಾನದಲ್ಲಿ ಬಂಧಿಸಲಾಗಿತ್ತು. ಬಳಿಕ 20 ವರ್ಷಗಳ ಕಾಲ ಜೈಲಿನಲ್ಲೇ ಕಾಲ ಕಳೆಯಬೇಕಾಯಿತು. ಆದರೆ ಇದೀಗ ಬಿಡುಗಡೆಯಾಗಿದ್ದಾನೆ. ಜಿಲ್ಲಾಧಿಕಾರಿಗಳ ತಂಡ ಇತ್ತೀಚೆಗೆ ಪಾಂಜಾಬ್‍ನ ಅಮೃತ್‍ಸರಕ್ಕೆ ಭೇಟಿ ನೀಡಿ ಆತನನ್ನು ಕರೆ ತಂದಿತ್ತು. ಬಳಿಕ ಕೋವಿಡ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು.

ಎರಡು ದಶಕಗಳ ಬಳಿಕ ಇದೀಗ ಬಿರ್ಜು ಮನೆಗೆ ಆಗಮಿಸಿದ್ದರಿಂದ ಕುಟುಂಬಸ್ಥರು ತುಂಬಾ ಭಾವುಕರಾಗಿದ್ದರು. ನನ್ನ ಸಹೋದರನನ್ನು ಮರಳಿ ಮನೆಗೆ ಸ್ವಾಗತಿಸುತ್ತಿರುವುದು ತುಂಬಾ ಸಂತಸವಾಗಿದೆ. ಮರಳಿ ಬರುತ್ತಾನೆ ಎಂದು ನಾನು ಊಹಿಸಿಯೂ ಇರಲಿಲ್ಲ. ಆತ ನಮಗಾಗಿ ಮರುಜನ್ಮ ಪಡೆದಿದ್ದಾನೆ ಎಂದು ಬಿರ್ಜು ಸಹೋದರಿ ಕಣ್ಣೀರು ಹಾಕುತ್ತ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಈ ಮಧ್ಯೆ ಬಿರ್ಜು ಪೋಷಕರು ಸಾವನ್ನಪ್ಪಿರುವುದು ಒಂದೆಡೆಯಾದರೆ, ಆತ ಓಡಿಯಾ ಭಾಷೆಯನ್ನು ಮರೆತಿದ್ದು, ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನೂ ಮರೆತಿದ್ದಾನೆ. ಹಿಂದಿಯಲ್ಲಿ ಮಾತನಾಡುತ್ತಿದ್ದಾನೆ. ಮರಳಿ ಮನೆಗೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಆದರೆ ಪಾಕ್ ಗಡಿ ಹೇಗೆ ಪ್ರವೇಶಿಸಿದ, ಲಾಹೋರ್ ಜೈಲಿಗೆ ಯಾವಾಗ ಹೋದ ಎಂಬುದು ಬಿರ್ಜುಗೆ ನೆನಪಾಗುತ್ತಿಲ್ಲ.

ಬಿರ್ಜು ಸುಂದರ್‍ಗಡಕ್ಕೆ ಆಗಮಿಸುತ್ತಿದ್ದಂತೆ ಕುತ್ರ ಬ್ಲಾಕ್ ಕಚೇರಿಗೆ ಕರೆದೊಯ್ಯಲಾಯಿತು. ಬ್ಲಾಕ್ ಡೆವಲಪ್‍ಮೆಂಟ್ ಆಫೀಸರ್(ಬಿಡಿಒ) ಸನ್ಮಾನಿಸಿದರು. ಅಲ್ಲದೆ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬಿರ್ಜುಗೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು. ಆಧಾರ್ ಹಾಗೂ ರೇಷನ್ ಕಾರ್ಡ್‍ಗಳನ್ನು ಸಹ ನೀಡಲಾಗಿದೆ. ಅಲ್ಲದೆ ಆತನಿಗಾಗಿ ಹೋಮ್ ಲೋನ್ ಸಹ ಕೊಡಿಸಲಾಗುತ್ತಿದೆ ಎಂದು ಬಿಡಿಒ ಮಾನಸ್ ರಂಜನ್ ರೇ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *