ಅಮೆರಿಕದಲ್ಲಿ ನಡೆಯುತ್ತಿದೆ ಅಧ್ಯಕ್ಷೀಯ ಚುನಾವಣೆ – ಸಮೀಕ್ಷೆಗಳು ಏನು ಹೇಳಿವೆ?

ವಾಷಿಂಗ್ಟನ್‌: ಜಗತ್ತಿಗೆ ಅತ್ಯಂತ ಪ್ರಮುಖವಾಗಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 1 ಗಂಟೆಗೆ ಮತದಾನ ಆರಂಭ ಆಗಿದೆ.

ನ್ಯೂ ಹ್ಯಾಂಪ್‍ಷೈರ್‌ನಲ್ಲಿ ಮೊದಲ ವೋಟ್ ನಮೂದಾಗಿದೆ. ಕೋವಿಡ್ ಮುಂಜಾಗ್ರತೆಯ ನಡುವೆ ಚುನಾವಣೆ ಜೋರಾಗಿ ನಡೆಯುತ್ತಿದೆ. ಈ ಬಾರಿ ಗೆಲ್ಲೋದು ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೋ ಅಥವಾ ಡೆಮಾಕ್ರೆಟಿಕ್‌ ಪಕ್ಷದ ಜೋ ಬಿಡೆನ್ ಅವರೋ ಎನ್ನುವುದು ನಾಳೆ ಹೊತ್ತಿಗೆ ಗೊತ್ತಾಲಿದೆ.

ಅಮೆರಿಕದಲ್ಲಿ ಒಟ್ಟು 23.9 ಕೋಟಿ ಮತದಾರರಿದ್ದು, ಈಗಾಗಲೇ ಅರ್ಧದಷ್ಟು ಮತದಾರರು ಇ-ಮೇಲ್ ಮತ್ತು ಅಂಚೆ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೋಸ್ಟಲ್ ಮತಗಳ ಮೇಲೆ ಟ್ರಂಪ್ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ 10 ಕೋಟಿ ಮಂದಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸೋಲಿನ ಭಯದಲ್ಲಿರುವ ಟ್ರಂಪ್ ಕೊನೆಯ ದಿನವಾದ ನಿನ್ನೆ, ಹಿಂದೆಂದೂ ಇರದ ರೀತಿಯಲ್ಲಿ ರಾತ್ರಿ 11 ಗಂಟೆಯವರೆಗೂ ಫ್ಲೋರಿಡಾದಲ್ಲಿ ಸಮಾವೇಶ ನಡೆಸಿ ಭಾಷಣ ಮಾಡಿದರು.

ಇತ್ತ ಜೋ ಬಿಡೆನ್ ಮಾತ್ರ ಕೂಲ್ ಆಗಿ ದಿನವನ್ನು ಆರಂಭಿಸಿದರು. ಟ್ರಂಪ್ ಅವರ ಅಧಿಕಾರದ ಸಮಯ ಮುಗಿಯಿತು. ಶ್ವೇತಭವನದಿಂದ ತೆರಳಲು ಅವರು ಗಂಟು ಮೂಟೆ ಕಟ್ಟಿಕೊಳ್ಳಬೇಕು ಎಂದು ವ್ಯಾಖ್ಯಾನಿಸಿದರು. ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಗೆಲ್ಲಬೇಕೆಂದು ತಮಿಳುನಾಡಿನಲ್ಲಿರುವ ಅವರ ಸ್ವಗ್ರಾಮ ತಿರುವರೂರಿನ ಲಸೇಂದ್ರಪುರಂನ ದೇಗುಲದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗಿದೆ. ಅಮೆರಿಕಾದ ಮಧ್ಯಮಗಳು ನಡೆಸಿದ ಸಮೀಕ್ಷೆಗಳಲ್ಲಿ ಜೋ ಬಿಡನ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಸಮೀಕ್ಷೆ ಏನು ಹೇಳಿವೆ?
ಸಿಎನ್‌ಎನ್‌ ಸಮೀಕ್ಷೆ ಜೋ ಬಿಡೆನ್‌ ಶೇ.54, ಟ್ರಂಪ್‌ ಶೇ.42 ಮತ ಪಡೆಯಲಿದ್ದಾರೆ ಎಂದು ಹೇಳಿದರೆ ನ್ಯೂಯಾರ್ಕ್ ಟೈಮ್ಸ್ ಜೋ ಬಿಡೆನ್‌ ಶೇ.50, ಟ್ರಂಪ್‌ ಶೇ.41 ರಷ್ಟು ಮತ ಪಡೆಯಲಿದ್ದಾರೆ.

ಎನ್‌ಬಿಸಿ ಟ್ರಂಪ್‌ ಶೇ.42, ಬಿಡೆನ್‌ ಶೇ. 52 ಮತ ಪಡೆಯಲಿದ್ದಾರೆ ಎಂದು ಹೇಳಿದರೆ ಫಾಕ್ಸ್‌ ನ್ಯೂಸ್‌ ಬಿಡೆನ್‌ ಶೇ. 52, ಟ್ರಂಪ್‌ ಶೇ.44ರಷ್ಟು ಮತ ಪಡೆಯಲಿದೆ ಎಂದು ಹೇಳಿದೆ. ರಾಯ್ಟರ್ಸ್‌ ಸಮೀಕ್ಷೆ ಬಿಡೆನ್‌ ಶೇ.52. ಟ್ರಂಪ್‌ ಶೇ. 42 ರಷ್ಟು ಮತ ಪಡೆಯಲಿದ್ದಾರೆ ಎಂದು ಹೇಳಿದೆ.

ಈ ಸಮೀಕ್ಷೆಯೇ ಅಂತಿಮವಲ್ಲ. 2016ರಲ್ಲಿ ಎಲ್ಲಾ ಸಮೀಕ್ಷೆಗಳು ಹಿಲರಿ ಕ್ಲಿಂಟನ್ ಗೆಲ್ಲಲಿದ್ದಾರೆ  ಎಂದಿದ್ದವು. ಆದರೆ ಅಂತಿಮ ಫಲಿತಾಂಶ ಬಂದಾಗ ಟ್ರಂಪ್‌ ಗೆದ್ದಿದ್ದರು.

Comments

Leave a Reply

Your email address will not be published. Required fields are marked *