ಚುನಾವಣೆ ನಡೆದ್ರೂ ಫಲಿತಾಂಶ ಪ್ರಕಟವಾಗಲ್ಲ: ಶಾಸಕ ಶಿವಲಿಂಗೇಗೌಡ

– ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

ಹಾಸನ: ಹಾಸನ ಮತ್ತು ಅರಸೀಕೆರೆ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದರೂ ಕೂಡ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಎಂದು ಶಾಸಕ ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ.

ಹಾಸನ, ಅರಸೀಕೆರೆ ನಗರಸಭೆ ಎರಡರ ಅಧ್ಯಕ್ಷ ಸ್ಥಾನ ಎಸ್‍ಟಿಗೆ ಮೀಸಲಾಗಿತ್ತು. ಎಸ್‍ಟಿ ಅಭ್ಯರ್ಥಿಗಳು ಬಿಜೆಪಿಯಿಂದ ಮಾತ್ರ ಜಯಗಳಿಸಿದ್ದರು. ಹೀಗಾಗಿ ಜೆಡಿಎಸ್ ಹೆಚ್ಚಿನ ಸ್ಥಾನ ಗೆದ್ದಿದ್ದರೂ, ಎರಡೂ ನಗರಸಭೆಯ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲೋಗೋದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಮೀಸಲಾತಿ ಕಾನೂನು ಬಾಹಿರ ಎಂದು ಜೆಡಿಎಸ್ ಮುಖಂಡರು ಈ ಹಿಂದೆಯೇ ಹೈಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದರು.

ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಪರಿಣಾಮ ಗುರುವಾರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಪರಿಣಾಮ ಜೆಡಿಎಸ್ ಮುಖಂಡರು ಈ ಬಗ್ಗೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇಂದು ಸುಪ್ರೀಂಕೋರ್ಟ್ ನಿಂದ ಮರು ವಿಚಾರಣೆಗೆ ಆದೇಶ ನೀಡಲಾಗಿದೆ. ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಸಬಹುದು. ಆದರೆ ಯಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎಂದು ಫಲಿತಾಂಶ ಪ್ರಕಟಿಸುವಂತಿಲ್ಲ. ಚುನಾವಣೆ ನಡೆಸಿದ ಬಳಿಕ ಇಡೀ ಕಡತವನ್ನ ಹೈಕೋರ್ಟ್ ಗೆ ಸಲ್ಲಿಸಬೇಕು. ನಂತರ ಮತ್ತೆ ಹೈಕೋರ್ಟ್ ನಲ್ಲಿ ಮರು ವಿಚಾರಣೆ ನಡೆಸಿ ಆದೇಶ ಪ್ರಕಟಿಸುವಂತೆ ತಿಳಿಸಿದೆ.

Comments

Leave a Reply

Your email address will not be published. Required fields are marked *