ಮಗುವನ್ನು ಹಿಡಿದ ತಕ್ಷಣ ನಮ್ಮ ಅಣ್ಣನ ಜೊತೆಗಿದ್ದಂತೆ ಫೀಲ್ ಆಯ್ತು – ಧ್ರುವ

– ಪೇರೆಂಟ್ಸ್ ಮೀಟಿಂಗ್ ವಿಚಾರವನ್ನು ಹಂಚಿಕೊಂಡ ಧ್ರುವ

ಬೆಂಗಳೂರು: ಅತ್ತಿಗೆಗೆ ಗಂಡು ಮಗು ಜನಿಸಿದ್ದು ತುಂಬಾ ಸಂತೋಷವಾಗಿದೆ. ಮಗುವನ್ನು ಮೊದಲು ಕೈಯಲ್ಲಿ ಹಿಡಿದಾಗ ನಮ್ಮಣ್ಣನ ಜೊತೆಗೆ ಇದ್ದ ಫೀಲ್ ಆಯ್ತು. ತುಂಬಾ ಖುಷಿಯಾಯಿತು ಎಂದು ನಟ ಧ್ರುವ ಸರ್ಜಾ ಜೂನಿಯರ್ ಚಿರಂಜೀವಿ ಸರ್ಜಾ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ ವಿಚಾರ ತಿಳಿದು ಕೂಡಲೇ ಧ್ರುವಾ ಸರ್ಜಾ ಪತ್ನಿ ಪ್ರೇರಣಾ ಜೊತೆ ಖಾಸಗಿ ಆಸ್ಪತ್ರೆಗೆ ಆಗಮಿಸಿದರು. ಮೇಘನಾ ಇದ್ದ ಕೊಠಡಿಗೆ ಆಗಮಿಸಿ ಮಗುವನ್ನು ಎತ್ತಿ ಸಂತಸ ಪಟ್ಟರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣನಿಗೆ ಅತ್ತಿಗೆಗೆ ಗಂಡು ಮಗುವಾಗಿದೆ. ಅತ್ತಿಗೆ ಸಹ ಆರಾಮವಾಗಿದ್ದಾರೆ. ಎಲ್ಲರೂ ಅವರಿಗೆ ಆಶೀರ್ವಾದ ಮಾಡಬೇಕೆಂದು ಕರ್ನಾಟಕದ ಜನತೆಯಲ್ಲಿ ಕೇಳಿಕೊಳ್ಳುತ್ತೇನೆ. ಖುಷಿ ಹೆಚ್ಚಾಗಿದ್ದರಿಂದ ತುಂಬಾ ರೋಮಾಂಚನವಾಗಿತ್ತು. ಹೀಗಾಗಿ ಮಗುವನ್ನು ಕೈಯಲ್ಲಿ ಹಿಡಿದ ತಕ್ಷಣದ ಅನುಭವನ್ನು ಅಂದಾಜಿಸಲು ಸಾಧ್ಯವಾಗಲಿಲ್ಲ. ಆ ಫೀಲ್ ಗೊತ್ತಾಗಲಿಲ್ಲ ಎಂದು ಮಗುವನ್ನು ಮೊದಲು ಕೈಯಲ್ಲಿ ಹಿಡಿದಾಗಿನ ಅನುಭವವನ್ನು ಹಂಚಿಕೊಂಡರು.

ಬೆಳ್ಳಿ ತೊಟ್ಟಿಲು ಖರೀದಿಸಿರುವುದು ಯಾರಿಗೂ ಗೊತ್ತಾಗಬಾರದು ಎಂದುಕೊಂಡಿದೆ. ಆದರೆ ಮಾಧ್ಯಮಗಳ ಮೂಲಕ ಬಹಿರಂಗವಾಯಿತು. ಮಗುವನ್ನು ಮೊದಲು ಕೈಯಲ್ಲಿ ಹಿಡಿದಾಗ ನಮ್ಮಣ್ಣನ ಜೊತೆಗೆ ಇದ್ದ ಫೀಲ್ ಆಯ್ತು. ಅಲ್ಲದೆ ಖುಷಿಯಾಯಿತು ಎಂದರು ಸಂತಸ ವ್ಯಕ್ತಪಡಿಸಿದರು.

ನಾನು ಅಣ್ಣನಿಗೆ ರೇಗಿಸುತ್ತಿದ್ದೆ. ಮಕ್ಕಳಾಗುತ್ತವೆ ಎಲ್ಲಾ ಓಕೆ, ನಿನ್ನನ್ನು ಪೇರೆಂಟ್ಸ್ ಮೀಟಿಂಗ್ ಕರೆಯುತ್ತಾರಲ್ಲ. ಶಾಲೆಯಲ್ಲಿ ನಿನ್ನ ಮೇಲೆ ಹೆಚ್ಚು ದೂರುಗಳಿದ್ದವು. ಇನ್ನು ನಿನ್ನ ಮಕ್ಕಳದು ಬೇಜಾನ್ ಇರುತ್ತೆ ಮಚಾ ಎಂದಿದ್ದೆ. ಅವನು ನನಗೆ ಮಗಾನೇ ಆಗೋದು. ಅವನದ್ದು ಸಹ ಶಾಲೆಯಲ್ಲಿ ಬೇಜಾನ್ ದೂರುಗಳಿರುತ್ತವೆ ಎಂದು ಹೇಳಿದ್ದ. ಹಿಂದೆ ನಾವಿಬ್ಬರು ಮಾತನಾಡಿದ ವಿಚಾರ ಈ ಸಂದರ್ಭದಲ್ಲಿ ನೆನಪಾಗುತ್ತಿದೆ. ಮಗುವಿಗೆ ಹೆಸರಿಡುವ ಕುರಿತು ಇನ್ನೂ ಯಾವುದೇ ಮಾತುಕತೆ ನಡೆದಿಲ್ಲ. ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *