ಇಂದಿನಿಂದ ಯುಪಿ, ಪಂಜಾಬ್, ಸಿಕ್ಕಿಂನಲ್ಲಿ ಶಾಲೆಗಳು ಓಪನ್ – ಮಾರ್ಗಸೂಚಿಯಲ್ಲಿ ಏನಿದೆ?

ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‍ನಿಂದ ಮುಚ್ಚಿರುವ ಶಾಲೆಗಳು ಹಂತ ಹಂತವಾಗಿ ತೆರೆಯಲ್ಪಡುತ್ತಿದೆ. ಅನ್‍ಲಾಕ್ 5.0 ಅಂಗವಾಗಿ 9 ರಿಂದ 12 ತರಗತಿವರೆಗಿನ ಶಾಲೆಗಳು ಉತ್ತರ ಪ್ರದೇಶ, ಪಂಜಾಬ್ ಮತ್ತು ಸಕ್ಕಿಂನಲ್ಲಿ ಸೋಮವಾರದಿಂದ ಪ್ರಾರಂಭವಾಗಿದೆ.

ಶಾಲೆಗಳು ಪ್ರಾರಂಭವಾಗುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಕಟ್ಟು ನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದೆ. ಪ್ರತಿಯೊಬ್ಬರು ಇದನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ.

ಉತ್ತರಪ್ರದೇಶದಲ್ಲಿ ಪ್ರಾರಂಭವಾಗುವ ಶಾಲೆಗಳು ಎರಡು ಪಾಳಿಯಲ್ಲಿ ತರಗತಿಗಳು ನಡೆಯಲಿದೆ. ಮೊದಲ ಪಾಳಿಯಲ್ಲಿ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿರುತ್ತಾರೆ. ಎರಡನೇ ಪಾಳಿಯಲ್ಲಿ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗುತ್ತದೆ.

ಮೊದಲ ಪಾಳಿಯಲ್ಲಿ ಬೆಳಿಗ್ಗೆ 8:50 ರಿಂದ ಮಧ್ಯಾಹ್ನ 3:50ರವರೆಗೆ ನಡೆದರೆ ಎರಡನೇ ಪಾಳಿಯನ್ನು ಮಧ್ಯಾಹ್ನ 12:20 ರಿಂದ ಮಧ್ಯಾಹ್ನ 3:30ರವರೆಗೆ ನಡೆಸಲಾಗುತ್ತದೆ. ಸರ್ಕಾರದ ಆದೇಶದಂತೆ ಪ್ರತಿ ತರಗತಿಯಲ್ಲಿ 50 ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುವುದು ಮತ್ತು ಉಳಿದ ವಿದ್ಯಾರ್ಥಿಗಳಿಗೆ ಮರುದಿನ ತರಗತಿಯನ್ನು ನಡೆಸಲಾಗುತ್ತದೆ.

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯ. ತರಗತಿಗಳು ಪ್ರಾರಂಭವಾಗುವ ಮುನ್ನ ಶುಚಿತ್ವವನ್ನು ಕಾಪಾಡಿಕೊಳ್ಳಲು ಸೂಚನೆಯನ್ನು ನೀಡಲಾಗಿದೆ. ಶಾಲೆಗಳಲ್ಲಿ ಸ್ಯಾನಿಟೈಸರ್, ಹ್ಯಾಂಡ್ ವಾಶ್ ಇಡಬೇಕು ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದೆ.

ಸಿಬ್ಬಂದಿ ಅಥವಾ ವಿದ್ಯಾರ್ಥಿಯಲ್ಲಿ ಜ್ವರ ಅಥವಾ ಶೀತದ ಲಕ್ಷಣ ಕಾಣಿಸಿಕೊಂಡರೆ ಪ್ರಾಥಮಿಕ ಚಿಕಿತ್ಸೆ ನಂತರ ಅವರನ್ನು ಮನೆಗೆ ಕಳುಹಿಸಿಕೊಡಬೇಕು. ಶಾಲಾ ಬಸ್ಸುಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಪಂಜಾಬ್‍ನಲ್ಲಿ ಹೇಗೆ?
ಸರ್ಕಾರದ ಆದೇಶದ ಪ್ರಕಾರ ಪ್ರತಿದಿನ ಮೂರು ಗಂಟೆಗಳ ಕಾಲ ಮಾತ್ರ ಶಾಲೆ ತೆರೆದಿರುತ್ತೆದೆ. ಕಂಟೈನ್ಮೆಂಟ್ ಜೋನ್‍ನಲ್ಲಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಗತಿಗೆ ಹಾಜರಾಗಲು ಅವಕಾಶ ಇರುವುದಿಲ್ಲ. ಓರ್ವ ವಿದ್ಯಾರ್ಥಿ ಮಾತ್ರ ಒಂದು ಬೆಂಚ್‍ನಲ್ಲಿ ಕುಳಿತು ಪಾಠ ಕೇಳಲು ಅವಕಾಶ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸಿಕ್ಕಿಂನಲ್ಲಿ ಹೇಗೆ?
ಸಿಕ್ಕಿಂನಲ್ಲಿ ಸೆಪ್ಟೆಂಬರ್ 21 ರಿಂದಲೇ ಹೆಚ್ಚಿನ ಶಾಲೆಗಳನ್ನು ತೆರೆಯಲಾಗಿದೆ. ಆದರೆ ಇಂದಿನಿಂದ ಎಲ್ಲಾ ಶಾಲೆಗಳನ್ನು ಶ್ರೇಣೀಕೃತ ರೀತಿಯಲ್ಲಿ ಪುನಃ ತೆರೆಯಲು ಸಿಕ್ಕಿಂ ಸರ್ಕಾರ ನಿರ್ಧರಿಸಿದೆ. ಜೊತೆಗೆ ಚಳಿಗಾಲದ ರಜೆ ಮತ್ತು ವಾರಾಂತ್ಯದ ರಜೆಯನ್ನು ರದ್ದುಗೊಳಿಸುವುದಾಗಿ ಸರ್ಕಾರ ಘೋಷಿಸಿದೆ.

ಆನ್‍ಲೈನ್ ತರಗತಿಗಳು ಆಫ್‍ಲೈನ್ ತರಗತಿಗಳೊಂದಿಗೆ ಮುಂದುವರೆಯುತ್ತವೆ. ವಿದ್ಯಾರ್ಥಿಯನ್ನು ಶಾಲೆಗೆ ಬರುವಂತೆ ಒತ್ತಾಯಿಸುವಂತಿಲ್ಲ. ಪೋಷಕರು ತಮ್ಮ ಮಗುವನ್ನು ಶಾಲೆಗೆ ಕಳುಹಿಸಲು ಲಿಖಿತ ಒಪ್ಪಿಗೆಯನ್ನು ನೀಡಬೇಕಾಗುತ್ತದೆ.

Comments

Leave a Reply

Your email address will not be published. Required fields are marked *