ಉತ್ತರ ಕರ್ನಾಟಕದಲ್ಲಿ ತಗ್ಗಿದ ಮಳೆ, ಪ್ರವಾಹ- ತಗ್ಗದ ಭೀತಿ

– ಗರ್ಭಿಣಿ, ವೃದ್ಧರು ಚಿಕಿತ್ಸೆಗಾಗಿ ಪರದಾಟ

ಬೆಂಗಳೂರು: ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಅಕ್ಷರಸಹ ನಲುಗಿ ಹೋಗಿವೆ, ಒಂದೆಡೆ ಮಳೆ, ಮತ್ತೊಂದೆಡೆ ಭೀಮಾ, ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಜನ ಕಂಗಾಲಾಗಿದ್ದಾರೆ. ಮನೆ ಕಳೆದುಕೊಂಡು ಬೀದಿಯಲ್ಲಿ ನಿಲ್ಲುವಂತಾಗಿದೆ. ಇದೀಗ ಸ್ವಲ್ಪ ಮಟ್ಟಿಗೆ ಮಳೆ ಹಾಗೂ ಪ್ರವಾಹ ತಗ್ಗಿದರೂ ಜನರಲ್ಲಿರುವ ಭೀತಿ ಮಾತ್ರ ಕಡಿಮೆಯಾಗಿಲ್ಲ.

ವಿಜಯಪುರ ಹಾಗೂ ಕಲಬುರಗಿಯ ಭೀಮಾ ನದಿ ತೀರಗಳಲ್ಲಿ ಹಲವು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದು, ಜನ ಅನ್ನ, ಆಶ್ರಯ ಕಳೆದುಕೊಂಡು ಕಂಗಾಲಾಗಿದ್ದಾರೆ. ಹೀಗಾಗಿ ಇದೀಗೆ ನೆರೆ ತಗ್ಗಿದರೂ ಸಂತ್ರಸ್ತರ ಭೀತಿ ಮಾತ್ರ ಕಡಿಮೆಯಾಗಿಲ್ಲ. ಭೀಮಾ ನದಿ ಪ್ರವಾಹದಿಂದಾಗಿ ಕಲಬುರಗಿಯ ಹೊನ್ನಕಿರಣಗಿ ಗ್ರಾಮದ ರಸ್ತೆ ಸಂಪರ್ಕ ಕಡಿತ ಸಂಪೂರ್ಣ ಕಡಿತವಾಗಿದೆ. ಗರ್ಭಿಣಿಯರು, ವೃದ್ದರು ಹಾಗೂ ಮಕ್ಕಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಗ್ರಾಮಕ್ಕೆ ಸೇತುವೆ ನಿರ್ಮಿಸಿ ಎಂದು ಹಲವು ಬಾರಿ ಮನವಿ ಮಾಡಿದರೂ ಇದಕ್ಕೆ ಯಾರೂ ಸ್ಪಂದಿಸಿಲ್ಲ. ಹೀಗಾಗಿ ಇದೀಗ ರಸ್ತೆ ಸಂಪರ್ಕ ಕಡಿತದಿಂದ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಜನ ಕಂಗಾಲಾಗಿದ್ದಾರೆ.

ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್ ಕೇವಲ ಮತಕ್ಕಾಗಿ ಬರುತ್ತಾರೆ. ಯಾವ ಜನಪ್ರತಿನಿಧಿಯೂ ನಮ್ಮ ಸಹಾಯಕ್ಕೆ ಬರುತ್ತಿಲ್ಲ. ಇಂತಹವರನ್ನು ಆಯ್ಕೆ ಮಾಡಿರುವುದು ನಮ್ಮ ದುರಂತ ಎಂದು ಉಕ್ಕಿ ಹರಿಯುವ ನದಿಯಲ್ಲಿ ನಿಂತು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ವಿಜಯಪುರದ ಪ್ರವಾಹದ ಪೀಡಿತ ಗ್ರಾಮಗಳಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ ಮೂಡಿದ್ದು, ವಿಜಯಪುರ ಜಿಲ್ಲೆಯ ಭೀಮಾ ನದಿ ಪ್ರವಾಹದಲ್ಲಿ ಸ್ವಲ್ಪ ಇಳಿಮುಖವಾಗಿದೆ. ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ, ಟಾಕಳಿ, ಧೂಳಖೇಡ ಗ್ರಾಮಗಳಲ್ಲಿ ಇಳಿಮುಖವಾಗಿದೆ. ಇಂಡಿ ಹಾಗೂ ಸಿಂಧಗಿ ತಾಲೂಕಿನ ಗ್ರಾಮಗಳಲ್ಲೂ ಸ್ವಲ್ಪ ಮಟ್ಟಿಗೆ ಪ್ರವಾಹ ಇಳಿಮುಖವಾಗಿದೆ. ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮದ ಸೇತುವೆಯ ಮಾಪನ ಪಟ್ಟಿಯಲ್ಲಿ ಒಂದು ಮೀಟರ್ ನೀರು ಕಡಿಮೆಯಾಗಿದೆ. ಭಾನುವಾರ ಸಂಜೆ 15 ಮೀ. ನೀರು ಹರಿಯುತ್ತಿತ್ತು ಸದ್ಯ 14 ಮೀ. ನೀರು ಹರಿಯುತ್ತಿದೆ.

ಇತ್ತ ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಶಹಪುರ, ಸುರಪುರ, ಯಾದಗಿರಿ ತಾಲೂಕಿನಲ್ಲಿ ವರುಣನ ಅಬ್ಬರ ಮತ್ತೆ ಜೋರಾಗಿದೆ. ಈಗಾಗಲೇ ಭೀಮಾ ನದಿ ಪ್ರವಾಹದಿಂದ ಜನ ಕಂಗಾಲಾಗಿದ್ದು, ಈಗ ಮತ್ತೆ ಜನರಲ್ಲಿ ಆತಂಕ ಹೆಚ್ಚಿದೆ.

Comments

Leave a Reply

Your email address will not be published. Required fields are marked *