ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯ ಮೌಲ್ಯದಲ್ಲಿ 36 ಲಕ್ಷ ರೂ. ಹೆಚ್ಚಳವಾಗಿದೆ.
ನರೇಂದ್ರ ಮೋದಿ ಅವರ ವಾರ್ಷಿಕ ಆಸ್ತಿ ವಿವರವನ್ನು ಪ್ರತಿ ವರ್ಷದಂತೆ ಪ್ರಧಾನಿ ಕಾರ್ಯಾಲಯ ಸ್ವಯಂ ಪ್ರೇರಣೆಯಿಂದ ಪ್ರಕಟಿಸಿದ್ದು, ಇದರಲ್ಲಿ 2020ರ ಜೂನ್ 30ರ ವರೆಗಿನ ಮಾಹಿತಿಯನ್ನು ನೀಡಲಾಗಿದೆ.
ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿರುವುದು ಮತ್ತು ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಿಕ್ಕಿರುವ ಕಾರಣ ಆಸ್ತಿಯ ಮೌಲ್ಯ ಏರಿಕೆಯಾಗಿದೆ. ಪ್ರಧಾನಿ ಮೋದಿಯವರು ಸಾಲವನ್ನು ತೆಗೆದುಕೊಂಡಿಲ್ಲ ಮತ್ತು ಅವರ ಹೆಸರಿನಲ್ಲಿ ಯಾವುದೇ ವಾಹನ ಇಲ್ಲ.

ಆಸ್ತಿ ಎಷ್ಟಿದೆ?
ನಗದು : 2020ರ ಜೂನ್ 30ರ ವೇಳೆಗೆ ಪ್ರಧಾನಿ ಮೋದಿಯವರ ಬಳಿ 31,450 ರೂ. ಇತ್ತು.
ಬ್ಯಾಂಕ್ ಖಾತೆಗಳ ಮಾಹಿತಿ: ಎಸ್‌ಬಿಐ ಗಾಂಧಿನಗರ ಬ್ರಾಂಚ್‌ನಲ್ಲಿರುವ ಉಳಿತಾಯ ಖಾತೆಯಲ್ಲಿ 3,38,173 ರೂ. ಹಣ ಇದೆ. ಕಳೆದ ವರ್ಷ ಇದು 4,143 ರೂ. ಇತ್ತು. ಈ ಬ್ಯಾಂಕಿನಲ್ಲಿ ಎಫ್‌ಡಿಆರ್ ಮತ್ತು ಎಂಒಡಿ ಬ್ಯಾಲೆನ್ಸ್ 1,60,28,039 ರೂ. ಇದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು 1,27,81,574 ರೂ. ಇತ್ತು. 2019 ರ ಲೋಕಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ ಅವರು ಇದನ್ನು ಘೋಷಿಸಿದ್ದರು.
ಬಾಂಡ್ ಹೂಡಿಕೆ: ಪ್ರಧಾನಮಂತ್ರಿಯವರು ಎಲ್ ಅಂಡ್ ಟಿ ಇನ್‍ಫ್ರಾಸ್ಟ್ರಕ್ಚರ್ ನಲ್ಲಿ ರೂ. 20,000 ಹೂಡಿಕೆ ಮಾಡಿದ್ದಾರೆ. 2012ರಲ್ಲಿ ಈ ಹೂಡಿಕೆ ಮಾಡಲಾಗಿತ್ತು.

ಎನ್‌ಎಸ್‌ಎಸ್, ವಿಮೆ: ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಅಡಿ 5,18,235 ರೂ. ಹೂಡಿಕೆ ಮಾಡಿದ್ದಾರೆ. ಇದರ ಜೊತೆಗೆ 1,59,281 ರೂ. ಮೌಲ್ಯದ ಎಲ್‍ಐಸಿ ಪ್ರೀಮಿಯಂ ಕಟ್ಟಿದ್ದಾರೆ.
ಚಿನ್ನ: ಮೋದಿಯವರು ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಈ ಉಂಗುರಗಳು 45 ಗ್ರಾಂ ತೂಕವನ್ನು ಹೊಂದಿದ್ದು ಇವುಗಳ ಮೌಲ್ಯ 1,51,875 ರೂ. ಆಗಿದೆ.
ಭೂಮಿ: ಗಾಂಧಿನಗರಲ್ಲಿ ಮೋದಿ ಅವರು 2002ರ ಅಕ್ಟೋಬರ್ 25 ರಂದು ನಾಲ್ಕನೇ ಒಂದರಷ್ಟು ಷೇರು (1,30,488 ರೂ.) ನೀಡಿ, ವಸತಿ ಕಟ್ಟಡವೊಂದನ್ನು ಖರೀದಿಸಿದ್ದರು. ಈ ಭೂಮಿಯ ಮೇಲೆ 2,47,208 ರೂ.ಗಳ ಹೂಡಿಕೆಯನ್ನು ಮಾಡಲಾಗಿದೆ. ಸದ್ಯ ಈ ಜಾಗದ ಮಾರುಕಟ್ಟೆ ಬೆಲೆ 1,10,00,000 ರೂ. ಎಂದು ಅಂದಾಜಿಸಲಾಗಿದೆ.


Leave a Reply