ಶ್ರೀರಾಮುಲು ನೆರವಿಗೆ ಬರ್ತಾರಾ ತ್ರಿಮೂರ್ತಿಗಳು?

ಬೆಂಗಳೂರು: ಡಿಸಿಎಂ ನಿರೀಕ್ಷೆಯಲ್ಲಿದ್ದ ಸಚಿವ ಶ್ರೀರಾಮುಲು ಅವರಿಗೆ ಸೋಮವಾರ ಸಿಎಂ ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದರು. ಎರಡು ಖಾತೆ ಹೋಗಿ ಒಂದು ಖಾತೆ ಬಂದಮೇಲೆ ಶ್ರೀರಾಮುಲು ಅವರ ಮುಂದಿನ ನಡೆ ತೀವ್ರ ಕುತೂಹಲ ಹುಟ್ಟುಹಾಕಿದೆ. ಸಿಎಂ ನಿರ್ಧಾರರಿಂದ ಅಸಮಾಧಾನಗೊಂಡಿರುವ ಶ್ರೀರಾಮುಲು ಹೈಕಮಾಂಡ್ ನಾಯಕರ ಸಂಪರ್ಕಕ್ಕೆ ಮುಂದಾಗಿದ್ದು, ಯಡಿಯೂರಪ್ಪ ಅವರ ಮೇಲೆ ತ್ರಿಮೂರ್ತಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

 

ಸೋಮವಾರ ಮಧ್ಯಾಹ್ನ ಸಿಎಂ ಭೇಟಿ ಬಳಿಕ ಹೈಕಮಾಂಡ್ ನಾಯಕರನ್ನ ಸಂಪರ್ಕಿಸಲು ಶ್ರೀರಾಮುಲು ಪ್ರಯತ್ನಿಸುತ್ತಿದ್ದಾರೆ. ಸಚಿವ ಸ್ಥಾನ ಅದಲು-ಬದಲು ಮಾಡುವ ವಿಷಯ ಕುರಿತು ಸಿಎಂ ವರಿಷ್ಠರ ಜೊತೆ ಚರ್ಚೆ ಮಾಡಿಲ್ಲ ಎಂದು ಹೇಳಲಾಗುತ್ತಿದ್ದು, ಯಡಿಯೂರಪ್ಪ ವಿರುದ್ಧ ದೂರು ಸಲ್ಲಿಕೆಗೆ ಶ್ರೀರಾಮುಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಂಪರ್ಕಿಸಲು ರಾಮುಲು ಯತ್ನಿಸುತ್ತಿದ್ದಾರೆ. ಇಂದು ಸಹ ಮೂವರಿಗೆ ಕರೆ ಮಾಡಿ ರಾಜ್ಯದಲ್ಲಾದ ದಿಢೀರ್ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರಂತೆ. ಹೈಕಮಾಂಡ್ ನಾಯಕರು ಶ್ರೀರಾಮುಲು ಪರ ಬ್ಯಾಟ್ ಬೀಸ್ತಾರಾ ಅಥವಾ ಸಿಎಂ ನಿರ್ಧಾರವನ್ನ ಬೆಂಬಲಿಸ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Comments

Leave a Reply

Your email address will not be published. Required fields are marked *