47 ಎಸೆತಕ್ಕೆ 100 ರನ್ ಜೊತೆಯಾಟ – ಐಪಿಎಲ್‍ನಲ್ಲಿ ಎಬಿಡಿ, ಕೊಹ್ಲಿ ದಾಖಲೆ

ಶಾರ್ಜಾ: ಐಪಿಎಲ್ 2020ರ ಭಾಗವಾಗಿ ಇಂದು ನಡೆದ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಎದುರಾಳಿ ತಂಡಕ್ಕೆ 195 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ. ಈ ಪಂದ್ಯದಲ್ಲಿ ಶತಕದ ಜೊತೆಯಾಡುವ ಮೂಲಕ ಐಪಿಎಲ್‍ನಲ್ಲಿ ಕೊಹ್ಲಿ, ಎಬಿಡಿ ದಾಖಲೆ ಬರೆದಿದ್ದಾರೆ.

16 ಓವರ್ ಗಳ ಅಂತ್ಯದ ವೇಳೆ ಆರ್ ಸಿಬಿ 129 ರನ್ ಗಳಿಸಿತ್ತು. ಈ ವೇಳೆ ಹೊಡಿಬಡಿ ಆಟಕ್ಕೆ ಮುಂದಾದ ಎಬಿ ಡಿವಿಲಿಯರ್ಸ್ 17ನೇ ಓವರಿನಲ್ಲಿ 2 ಸಿಕ್ಸರ್, ಬೌಂಡರಿ ಚಚ್ಚಿ ಓವರ್ ನಲ್ಲಿ 17 ರನ್ ಸಿಡಿಸಿದರು. 18ನೇ ಮೊದಲ 2 ಎಸೆತಗಳಲ್ಲಿ 10 ರನ್ ಗಳಿಸಿ ಅರ್ಧ ಶತಕ ಪೂರೈಸಿದರು. ಅಂತಿಮ 5 ಓವರ್ ಗಳಲ್ಲಿ ಎಬಿಡಿ, ಕೊಹ್ಲಿ ಜೋಡಿ 79 ರನ್ ಸಿಡಿಸಿತು.

47 ಎಸೆತಗಳಲ್ಲಿ ಶತಕದ ಜೊತೆಯಾಟ ಆಡಿದ ಜೋಡಿ ನಿಗದಿತ 20 ಓವರ್ ಗಳಲ್ಲಿ ತಂಡ 2 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಲು ಕಾರಣವಾಯಿತು. 28 ಎಸೆತಗಳಲ್ಲಿ ಕೊಹ್ಲಿ 33 ರನ್, ಎಬಿಡಿ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಅಜೇಯರಾಗಿ ಉಳಿದರು. ಐಪಿಎಲ್‍ನಲ್ಲಿ ಎಬಿಡಿ, ಕೊಹ್ಲಿ ಜೋಡಿ 3 ಸಾವಿರ ಪೂರೈಸಿತು. ಅಲ್ಲದೇ ಐಪಿಎಲ್‍ನಲ್ಲಿ 10ನೇ ಬಾರಿಗೆ ಶತಕ ಜೊತೆಯಾಟವಾಡಿದ ಜೋಡಿ ಎಂಬ ದಾಖಲೆ ಬರೆದರು.

ಇಲ್ಲಿಯವರೆಗೆ ಐಪಿಎಲ್‍ನಲ್ಲಿ ಕ್ರೀಸ್ ಗೇಲ್ – ವಿರಾಟ್ ಕೊಹ್ಲಿ 9, ಧವನ್ – ವಾರ್ನರ್ 6, ಜಾನಿ ಬೈರ್​ಸ್ಟೋ – ವಾರ್ನರ್ 5, ಗಂಭೀರ್ – ಉತ್ತಪ್ಪ ಜೋಡಿ 5 ಬಾರಿ ಶತಕದ ಜೊತೆಯಾಟವಾಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿಗೆ ಆರಂಭಿಕರಾದ ಪಡಿಕ್ಕಲ್ ಹಾಗೂ ಫಿಂಚ್ ಉತ್ತಮ ಆರಂಭ ನೀಡಿದರು. ಆರಂಭದಿಂದಲೇ ರನ್ ಗಳಿಸುವತ್ತ ಗಮನಹರಿಸಿದ ಜೋಡಿ ಪವರ್ ಪ್ಲೇನಲ್ಲಿ 47 ರನ್ ಗಳನ್ನು ಪೇರಿಸಿತ್ತು. ಅಲ್ಲದೇ ಮೊದಲ ವಿಕೆಟ್‍ಗೆ 50 ರನ್ ಗಳ ಜೊತೆಯಾಟವನ್ನು ನೀಡಿತು. ಟೂರ್ನಿಯಲ್ಲಿ 3 ಅರ್ಧ ಶತಕಗಳೊಂದಿಗೆ ಉತ್ತಮ ಫಾರ್ಮ್‍ನಲ್ಲಿದ್ದ ಪಡಿಕ್ಕಲ್ 23 ಎಸೆತಗಳಲ್ಲಿ 4 ಬೌಂಡರಿ, ಸಿಕ್ಸರ್ ನೊಂದಿಗೆ 32 ರನ್ ಗಳಿಸಿದ್ದ ಸಂದರ್ಭದಲ್ಲಿ ವಿಕೆಟ್ ಒಪ್ಪಿಸಿದರು. ಆ ವೇಳೆಗೆ ಆರ್ ಸಿಬಿ 67 ರನ್ ಗಳಿಸಿತ್ತು. ಈ ಆವೃತ್ತಿಯಲ್ಲಿ ಫಿಂಚ್, ಪಡಿಕ್ಕಲ್ ಜೋಡಿ ಮೊದಲ ವಿಕೆಟ್ 50 ರನ್ ಗಳಿಸಿದ ಯಾವುದೇ ಪಂದ್ಯವನ್ನು ಆರ್ ಸಿಬಿ ಸೋತಿಲ್ಲ ಎಂಬುವುದು ವಿಶೇಷ ಅಂಶವಾಗಿದೆ.

ಪಡಿಕ್ಕಲ್ ಔಟಾದ ಬಳಿಕ ನಾಯಕ ವಿರಾಟ್ ಕೊಹ್ಲಿರೊಂದಿಗೆ ಕೂಡಿಕೊಂಡ ಫಿಂಚ್ ನಿಧಾನವಾಗಿ ರನ್ ಗಳಿಸುವುದರೊಂದಿಗೆ ಅರ್ಧ ಶತಕದತ್ತ ಮುನ್ನಡೆದಿದ್ದರು. ಆದರೆ 12ನೇ ಓವರಿನ 2 ಎಸೆತದಲ್ಲಿ ಪ್ರಸಿದ್ಧ ಕೃಷ್ಣ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಅರ್ಧ ಶತಕದಿಂದ ವಂಚಿತರಾದರು. 37 ಎಸೆತಗಳಲ್ಲಿ 4 ಬೌಂಡರಿ, ಸಿಕ್ಸರ್ ನೊಂದಿಗೆ 46 ರನ್ ಗಳಿಸಿ ಫಿಂಚ್ ಪೆವಿಲಿಯನ್‍ಗೆ ಮರಳಿದರು.

Comments

Leave a Reply

Your email address will not be published. Required fields are marked *