ದಿಢೀರ್ ಬೆಳವಣಿಗೆ – ರಾಮುಲು ಬಳಿಯಿದ್ದ ಆರೋಗ್ಯ ಖಾತೆಗೆ ಕತ್ತರಿ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿನ ದಿಢೀರ್ ಬೆಳವಣಿಗೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರ ಅಧಿಕಾರಕ್ಕೆ ಕತ್ತರಿ ಬೀಳುತ್ತಿದೆ. ಕೊರೋನಾ ಹೆಚ್ಚಳದ ನೆಪ ಹೇಳಿ ರಾಮುಲು ಅವರ ಬಳಿಯಿದ್ದ ಆರೋಗ್ಯ ಖಾತೆಯನ್ನು ಸಚಿವ ಸುಧಾಕರ್‍ಗೆ ಹೆಚ್ಚುವರಿಯಾಗಿ ನೀಡಲು ಸಿಎಂ ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

ಶೀಘ್ರ ನಡೆಯಲಿದ್ದ ಸಚಿವ ಸಂಪುಟ ಪುನಾರಚನೆ ಆದರೆ ಡಿಸಿಎಂ ಸ್ಥಾನ ತಮಗೆ ಸಿಗಬೇಕೆಂದು ಪ್ರಬಲ ಲಾಬಿ ನಡೆಸಿದ್ರು ಸಚಿವ ಶ್ರೀರಾಮುಲು. ಈ ಬಗ್ಗೆ ದೇವರಿಗೂ ಪತ್ರ ಬರೆದು ತಮ್ಮ ಆಸೆ ಹೊರಹಾಕಿದ್ದರು. ಆದರೆ ಇಂದು ರಾತ್ರಿ ಅಥವಾ ಸೋಮವಾರ ಖಾತೆ ಬದಲಾವಣೆಯ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

ಇದಕ್ಕೆ ರಾಮುಲು ಒಪ್ಪಿದ್ದಾರಾ ಇಲ್ಲವಾ ಅನ್ನೋದು ಗೊತ್ತಾಗಿಲ್ಲ. ಪ್ರತಿಕ್ರಿಯೆಗೆ ಅವರು ಲಭ್ಯ ಆಗಿಲ್ಲ. ಈ ಬೆಳವಣಿಗೆ ತೀವ್ರ ಸಂಚಲನಕ್ಕೆ ಕಾರಣ ಆಗಿದೆ. ಇದು ಉಪ ಚುನಾವಣೆ ಮೇಲೇನಾದ್ರೂ ಪರಿಣಾಮ ಬೀರುತ್ತಾ ಎಂಬ ಲೆಕ್ಕಾಚಾರಗಳು ಶುರುವಾಗಿವೆ.

 

ಕೋವಿಡ್ ಸೋಂಕು ಆರಂಭದಲ್ಲಿ ಸಚಿವ ರಾಮುಲು ಅವರೇ ಎಲ್ಲವನ್ನು ನಿಭಾಯಿಸುತ್ತಿದ್ದರು. ಆದರೆ ಮಗಳ ಮದುವೆ ಹಿನ್ನೆಲೆಯಲ್ಲಿ ಸ್ವಲ್ಪ ಬಿಡುವು ಪಡೆದುಕೊಂಡಿದ್ರು. ಈ ಹಂತದಲ್ಲಿ ಸಚಿವ ಸುಧಾಕರ್ ಕೊರೋನಾ ನಿರ್ವಹಣೆಯ ಉಸ್ತುವಾರಿ ಹೊತ್ತಿದ್ರು. ನಂತರ ರಾಮುಲು ಮತ್ತೆ ಕರ್ತವ್ಯಕ್ಕೆ ವಾಪಸ್ ಆದ್ಮೇಲೆ ಇಬ್ಬರ ನಡ್ವೆ ಕೊರೋನಾ ಉಸ್ತುವಾರಿ ಸಂಬಂಧ ಮುಸುಕಿನ ಗುದ್ದಾಟ ನಡೆದಿತ್ತು. ಇಬ್ಬರು ಒಂದೊಂದು ಹೇಳಿಕೆ ನೀಡಿ ಗೊಂದಲಕ್ಕೆ ಕಾರಣ ಆಗಿದ್ರು.

ಈ ಬಗ್ಗೆ ಸಿಎಂ ಮುಂದೆಯೇ ತೀವ್ರ ಅಸಮಾಧಾನ ವನ್ನು ಸಚಿವ ರಾಮುಲು ಹೊರಹಾಕಿದ್ರು. ನಂತರ ಕೊರೋನಾ ಮಾಹಿತಿ ನೀಡುವುದನ್ನು  ಸರ್ಕಾರ ಬಿಟ್ಟುಬಿಡ್ತು. ಕೊನೆಗೆ ಇದಕ್ಕೆ ಹೊಣೆ ಯಾರು ಎನ್ನುವುದೇ ಗೊತ್ತಾಗ್ತಿರಲಿಲ್ಲ. ಇದೀಗ ಸೋಂಕು ಹೆಚ್ಚಳ ಆಗಿದೆ. ಖಾತೆ ನಿಭಾಯಿಸಲು ಆಗಲಿಲ್ಲ ಎನ್ನುವ ಕಾರಣಕ್ಕೆ ರಾಮುಲು ಅವರ ಅಧಿಕಾರಕ್ಕೆ ಕತ್ತರಿ ಹಾಕಲಾಯ್ತಾ ಎಂಬ ಪ್ರಶ್ನೆ ಎದ್ದಿದೆ.

ಯಾರಿಗೆ ಯಾವ ಖಾತೆ?
* ಸಚಿವ ರಾಮುಲು ಬಳಿಯಿದ್ದ ಆರೋಗ್ಯ ಖಾತೆಗೆ ಕತ್ತರಿ
* ಸಚಿವ ಸುಧಾಕರಿಗೆ ಹೆಚ್ಚುವರಿಯಾಗಿ ಆರೋಗ್ಯ ಖಾತೆ
* ಸದ್ಯ ರಾಮುಲು ಬಳಿ ಹಿಂದುಳಿದ ವರ್ಗಗಳ ಖಾತೆ ಹೆಚ್ಚುವರಿ ಇದೆ
* ಇದರ ಜೊತೆಗೆ ಶ್ರೀರಾಮುಲುಗೆ ಸಮಾಜ ಕಲ್ಯಾಣ ಖಾತೆ ಸಾಧ್ಯತೆ..
* ಸದ್ಯ ಡಿಸಿಎಂ ಕಾರಜೋಳ ಬಳಿ ಹೆಚ್ಚುವರಿ ಇರುವ ಸಮಾಜ ಕಲ್ಯಾಣ
* ಕಾರಜೋಳ ಬಳಿ ಲೋಕೋಪಯೋಗಿ ಖಾತೆಯನ್ನು ಉಳಿಸಲು ಚಿಂತನೆ

ರಾಮುಲು ಬದಲಾವಣೆಗೆ ಕಾರಣ?
* ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಳ
* ಆರೋಗ್ಯ, ವೈದ್ಯಕೀಯ ಖಾತೆ ಒಬ್ಬರ ಬಳಿಯೇ ಇದ್ದರೇ ನಿರ್ವಹಣೆ ಸುಲಭ (ಪ್ರ್ರತ್ಯೇಕವಾಗಿದ್ದರೆ ನಿರ್ವಹಣೆ ಗೊಂದಲ)
* ಕೊರೋನಾ ನಿಯಂತ್ರಣ ನಿರ್ವಹಣೆಗೆ ಅನುಕೂಲ ಆಗಲಿದೆ ಎಂಬ ನೆಪ
* ಪ್ರತ್ಯೇಕ ಹೇಳಿಕೆಗಳಿಂದ ಉಂಟಾಗುತ್ತಿದ್ದ ಗೊಂದಲ ನಿವಾರಣೆಗೆ ಕ್ರಮ

Comments

Leave a Reply

Your email address will not be published. Required fields are marked *