ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸಿಕ್ತು ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ ಪಟ್ಟ

ಹಾಸನ: ಹಾಸನ ಜಿಲ್ಲೆಯಲ್ಲಿ ಜೆಡಿಎಸ್‍ಗೆ ಮೀಸಲಾತಿ ಮೂಲಕ ಟಾಂಗ್ ನೀಡಿರುವ ಬಿಜೆಪಿ ಸರ್ಕಾರ, ಹಾಸನ ಮತ್ತು ಅರಸೀಕೆರೆ ಎರಡೂ ನಗರಸಭೆಗೆ ಎಸ್.ಟಿ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಮೀಸಲಾತಿ ನೀಡಿ ಪಟ್ಟಿ ಪ್ರಕಟಿಸಿದೆ.

ಈ ಕಾರಣದಿಂದ ಹಾಸನ ಮತ್ತು ಅರಸೀಕೆರೆ ಎರಡೂ ಕಡೆ ಬಹಮತವಿದ್ದರೂ ಜೆಡಿಎಸ್ ಸದಸ್ಯರು ಅಧ್ಯಕ್ಷ ಸ್ಥಾನ ವಂಚಿತರಾಗಿದ್ದಾರೆ. ಹಾಸನ ಮತ್ತು ಅರಸೀಕೆರೆ ಎರಡು ನಗರಸಭೆಯಲ್ಲಿ ಬಿಜೆಪಿಯಿಂದ ಮಾತ್ರ ಎಸ್.ಟಿ ಸದಸ್ಯರು ಆಯ್ಕೆಯಾಗಿರುವುದರಿಂದ, ನಗರಸಭೆಗಳ ಅಧ್ಯಕ್ಷಗಾದಿ ನಿರಾಯಾಸವಾಗಿ ಬಿಜೆಪಿ ಸದಸ್ಯರ ಪಾಲಾಗಲಿದೆ.

ಹಾಸನ ನಗರಸಭೆ ಒಟ್ಟು 35 ಸದಸ್ಯರ ಸಂಖ್ಯಾ ಬಲ ಹೊಂದಿದ್ದು ಜೆಡಿಎಸ್‍ನಿಂದ 17, ಕಾಂಗ್ರೆಸ್ಸಿನಿಂದ 02, ಬಿಜೆಪಿಯಿಂದ 13, ಹಾಗೂ 3 ಜನ ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಆಯ್ಕೆಯಾಗಿರುವ 34ನೇ ವಾರ್ಡ್ ಮೋಹನ್ ಕುಮಾರ್ ಮಾತ್ರ ಎಸ್‍ಟಿ ಪಂಗಡದಿಂದ ಆಯ್ಕೆಯಾಗಿದ್ದಾರೆ. ಹೀಗಾಗಿ ಹಾಸನ ನಗರಸಭೆಯಲ್ಲಿ ಜೆಡಿಎಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮೀಸಲಾತಿ ಕಾರಣದಿಂದ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾದಂತಾಗಿದೆ.

ಅರಸೀಕೆರೆ ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದು, ಜೆಡಿಎಸ್ 21, ಕಾಂಗ್ರೆಸ್ 01, ಬಿಜೆಪಿ 05, ಮೂವರು ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ 22ನೇ ವಾರ್ಡ್ ಬಿಜೆಪಿ ಸದಸ್ಯ ಗಿರೀಶ್ ಮಾತ್ರ ಎಸ್‍ಟಿ ಪಂಗಡಕ್ಕೆ ಸೇರಿದ್ದು, ಮೀಸಲಾತಿ ಕಾರಣದಿಂದ ಅರಸೀಕೆರೆಯಲ್ಲಿ ಕೇವಲ ಐವರು ಸದಸ್ಯರನ್ನು ಹೊಂದಿರೋ ಬಿಜೆಪಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಂತಾಗಿದೆ. ಇದರಿಂದ ಹಾಸನ ಜೆಡಿಎಸ್ ವಲಯದಲ್ಲಿ ಆಕ್ರೋಶ ಹೆಚ್ಚಾಗಿದೆ.

ಹಾಸನ ಶಾಸಕ ಪ್ರೀತಂಗೌಡ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಸಂತೋಷ್ ಕೈವಾಡದಿಂದಾಗಿ ಈ ರೀತಿಯ ಮೀಸಲಾತಿ ಪ್ರಕಟವಾಗಿದೆ ಎಂದು ಜೆಡಿಎಸ್ ನಾಯಕರು ಪರೋಕ್ಷವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *