ಸೇಡಿನ ಕೊಲೆಗಳಲ್ಲಿ ದೇಶಕ್ಕೆ ಬೆಂಗಳೂರು ನಂ.1- ನಂತರದ ಸ್ಥಾನದಲ್ಲಿ ದೆಹಲಿ

ಬೆಂಗಳೂರು: ದೇಶದಲ್ಲೇ ಹೆಚ್ಚು ಸೇಡಿನ ಕೊಲೆಗಳು ನಡೆದಿರುವ ಪೈಕಿ ಸಿಲಿಕಾನ್ ಸಿಟಿ ನಂ.1 ಸ್ಥಾನ ಪಡೆದಿದೆ. ಎರಡನೇ ಸ್ಥಾನದಲ್ಲಿ ದೆಹಲಿ ಇದೆ.

ಉದ್ಯಾನ ನಗರಿಯಲ್ಲಿ 2019ರಲ್ಲಿ 106 ಸೇಡಿನ ಕೊಲೆಗಳು ನಡೆದಿದ್ದು, ದೆಹಲಿಯಲ್ಲಿ 87 ಕೊಲೆಗಳಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(ಎನ್‍ಸಿಆರ್‍ಬಿ) ವರದಿ ಬಿಡುಗಡೆ ಮಾಡಿದೆ. 2019ರಲ್ಲಿ ಬೆಂಗಳೂರಿನಲ್ಲಿ ಒಟ್ಟು 210 ಕೊಲೆ ನಡೆದಿದ್ದು, ಒಟ್ಟು ಕೊಲೆಗಳ ಸಂಖ್ಯೆಯಲ್ಲಿ ದೆಹಲಿ ಮೊದಲ ಸ್ಥಾನ ಪಡೆದಿದೆ. ದೆಹಲಿಯಲ್ಲಿ ಒಟ್ಟು 505 ಕೊಲೆ ಪ್ರಕರಣಗಳು ನಡೆದಿವೆ.

ಒಟ್ಟು ಕೊಲೆ ಪ್ರಕರಣಲ್ಲಿ ಶೇ.75 ಪ್ರಕರಣಗಳು ವೈಯಕ್ತಿಕ ದ್ವೇಷ, ಮಾರಾಟ ಹಾಗೂ ಪೂರ್ವ ನಿಯೋಜಿತ ಕೃತ್ಯಗಳಾಗಿವೆ. ಅಲ್ಲದೆ ಕೊಲೆಗಾರರು ಸಂತ್ರಸ್ತರಿಗೆ ಪರಿಚಿತರೇ ಆಗಿದ್ದಾರೆ. ವೈಯಕ್ತಿಕ ದ್ವೇಷದಿಂದಾಗಿಯೇ ಹೆಚ್ಚಿನ ಕೊಲೆಗಳು ನಡೆದಿದ್ದು, ಭೂಮಿ, ಮಹಿಳೆ ಹಾಗೂ ಸಂಪತ್ತಿಗಾಗಿ ಹೆಚ್ಚು ಕೊಲೆ ಪ್ರಕರಣಗಳು ನಡೆದಿವೆ ಎಂಬುದು ಬಹಿರಂಗವಾಗಿದೆ. ವೈಯಕ್ತಿಕ ದ್ವೇಷದ ಕೊಲೆಗಳು ಕುಟುಂಬಗಳಲ್ಲಿ, ಸ್ನೇಹಿತರು ಹಾಗೂ ಒಂದೇ ಪ್ರದೇಶದಲ್ಲಿ ವಾಸಿಸುವ ಜನರ ನಡುವೆ ನಡೆದಿವೆ. ಲಾಭಕ್ಕಾಗಿ ನಡೆದಿರುವ ಕೊಲೆಗಳಿಗೆ ಈ ತನಿಖೆ ಕಷ್ಟವೇನಲ್ಲ. ಅಪರಾಧ ಉದ್ದೇಶವನ್ನು ಪತ್ತೆ ಹಚ್ಚಿದ ಬಳಿಕ ಶಂಕಿತರನ್ನು ಪತ್ತೆ ಹಚ್ಚುವುದು ಹಾಗೂ ಬಂಧಿಸುವುದು ಸುಲಭವಾಗುತ್ತದೆ ಎಂದು ನಿವೃತ್ತ ಡಿಜಿಪಿ ಡಿ.ವಿ.ಗುರುಪ್ರಸಾದ್ ತಿಳಿಸಿದ್ದಾರೆ.

ವೈಯಕ್ತಿಕ ಲಾಭಕ್ಕಾಗಿ ನಡೆಯುವ ಕೊಲೆಗಳು ಹೆಚ್ಚು ಆತಂಕಕಾರಿ. ದ್ವೇಷದ ಆಧಾರಿತ ಕೊಲೆಗಳು ಹೆಚ್ಚಾಗಿ ನಡೆಯುವುದು ವೈಯಕ್ತಿಕ ಕಾರಣಗಳಿಂದ. ಲಾಭಾಕ್ಕಾಗಿ ಕೊಲೆ ಮಾಡುವ ಉದ್ದೇಶವೆಂದರೆ ಚಿನ್ನ, ಹಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಪಡೆದುಕೊಳ್ಳುವುದು. ಇತ್ತೀಚೆಗೆ ಬೆಂಗಳೂರಿನ ಹೆಬ್ಬಗೋಡುವಿನಲ್ಲಿ 25 ವರ್ಷದ ಯುವತಿಯ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಕೊಲೆಗಾರ ಮೊಬೈಲ್ ಫೋನ್ ಹಾಗೂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ. ಲಾಭಕ್ಕಾಗಿ ಮಾಡುವ ಕೊಲೆಯ ಪ್ರಕರಣಗಳು ಪೊಲೀಸರಿಗೆ ಸವಾಲಾಗಿ ಪರಿಣಮಿಸುತ್ತವೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *