ಕಷ್ಟದಲ್ಲಿ ನನ್ನ ಜೊತೆ ನಿಂತಂತೆ ನಾನು ಎಂದಿಗೂ ನಿನ್ನ ಪಕ್ಕದಲ್ಲೇ ನಿಲ್ಲುವೆ – ಮೇಘನಾ

– ನಮ್ಮ ಚಿರು ನಕ್ಕಂತೆ ನುಗುತ್ತಿರು ಬಿಲ್

ಬೆಂಗಳೂರು: ಕಷ್ಟದಲ್ಲಿ ನೀನು ನನ್ನ ಜೊತೆ ನಿಂತಂತೆ ನಾನು ಎಂದಿಗೂ ನಿನ್ನ ಜೊತೆಯಲ್ಲೇ ನಿಲ್ಲುವೆ ಎಂದು ಹೇಳುವ ಮೂಲಕ ನಟಿ ಮೇಘನಾ ರಾಜ್ ಅವರು ಮೈದುನ ಧ್ರುವ ಸರ್ಜಾ ಅವರಿಗೆ ಹುಟ್ಟುಹಬ್ಬದ ವಿಶ್ ತಿಳಿಸಿದ್ದಾರೆ.

ಇಂದು ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹುಟ್ಟುಹಬ್ಬ. ಇಂದು ಧ್ರುವ ಅಣ್ಣ ಇಲ್ಲದ 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಧ್ರುವ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಅತ್ತಿಗೆ ಮೇಘನಾ ಅವರು, ನಿನ್ನ ಅಣ್ಣ ಚಿರುವಿನ ಹಾಗೇ ಸದಾ ನಗುತ್ತಿರು ಎಂದು ಆಶೀರ್ವಾದ ಮಾಡಿದ್ದಾರೆ.

https://www.instagram.com/p/CGAJEahHR59/?igshid=5m0foogura94

ಧ್ರುವ ಹುಟ್ಟುಹಬ್ಬದ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿರುವ ಮೇಘನಾ, ನನ್ನ ಕಷ್ಟದ ಸಮಯದಲ್ಲಿ ನೀನು ಹೇಗೆ ನನ್ನ ಜೊತೆಯಲ್ಲಿ ಗಟ್ಟಿಯಾಗಿ ನಿಂತಿದ್ದೆ ಹಾಗೆಯೇ ನಾನು ಕೂಡ ಶಾಶ್ವತವಾಗಿ ನಿನ್ನ ಪಕ್ಕ ನಿಲ್ಲುತ್ತೇನೆ. ಪ್ರಾಮಿಸ್ ಬರ್ತ್‍ಡೇ ಬಾಯ್. ಸದಾ ನೀನು ಖುಷಿಯಾಗಿರು ಎಂದು ಆಶೀಸುತ್ತೇನೆ. ನಮ್ಮ ಚಿರು ನಕ್ಕಂತೆ ನೀನು ನಗುತ್ತಿರು. ಹ್ಯಾಪಿಸ್ಟ್ ಬರ್ತ್‍ಡೇ ಬಿಲ್ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಕೇವಲ ಮೂರು ಸಿನಿಮಾ ಮಾಡಿ ಚಂದನವನದಲ್ಲಿ ಬಿಗ್ ಸ್ಟಾರ್ ಆಗಿ ಬೆಳೆದು ನಿಂತ ಧ್ರುವ, ಅಣ್ಣನನ್ನು ಕಳೆದುಕೊಂಡು ದುಃಖದಲ್ಲಿ ಇದ್ದಾರೆ. ಈ ಕಾರಣದಿಂದಲೇ ಈ ವರ್ಷ ಧ್ರುವ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿಲ್ಲ. ಜೊತೆಗೆ ಕೊರೊನಾ ಕೂಡ ರಾಜ್ಯದಲ್ಲಿ ಅಬ್ಬರಿಸುತ್ತಿದೆ. ಈ ಕಾಣದಿಂದ ಹೆಚ್ಚು ಜನ ಸೇರುವುದು ಬೇಡ ಎಂಬ ನಿಟ್ಟಿನಲ್ಲಿ ಧ್ರುವ ಸರ್ಜಾ ಅವರು ಈ ಬಾರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಇದನ್ನು ಓದಿ: ಮೇಘನಾ ಕೈ ಹಿಡಿದು ಹೆಜ್ಜೆ ಹಾಕಿದ ಚಿರು – ಕಲಾವಿದನ ಕಲೆಗೆ ನೆಟ್ಟಿಗರು ಫಿದಾ

ಈಗಾಗಲೇ ಧ್ರುವ ಅವರ ಬಹು ನೀರಿಕ್ಷಿತ ಚಿತ್ರ ಪೊಗರು ಬಿಡುಗಡೆಗೆ ತಯಾರಿಯಾಗುತ್ತಿದೆ. ಚಿತ್ರದ ಬಹುತೇಕ ಸಿನಿಮಾದ ಶೂಟಿಂಗ್ ಮುಗಿದ್ದಿದ್ದು, ಕೊರೊನಾ ಕಾರಣದಿಂದ ನಿಂತಿದ್ದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಈ ನಡುವೆ ಧ್ರುವ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಚಿತ್ರ ಘೋಷಣೆಯಾಗಿದ್ದು, 2012ರಲ್ಲಿ ಅದ್ಧೂರಿ ಎಂಬ ಸೂಪರ್ ಹಿಟ್ ಲವ್ ಸಿನಿಮಾ ನೀಡಿದ್ದ ಧ್ರುವ ಹಾಗೂ ಎಪಿ ಅರ್ಜುನ್ ಜೋಡಿ ಮತ್ತೆ ಒಂದಾಗಿದೆ.

ಭಾನುವಾರವಷ್ಟೇ ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು.

Comments

Leave a Reply

Your email address will not be published. Required fields are marked *