ಅಕ್ಟೋಬರ್ ಮೊದಲ ವಾರದಲ್ಲಿ ಸಂಪುಟ ಪುನಾರಚನೆ? – 6+2 ಫಾರ್ಮುಲಾಗೆ ಒಪ್ಪಿಗೆ ಸಾಧ್ಯತೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆಯೋ? ಪುನಾರಚನೆಯೋ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸಂಪುಟ ವಿಸ್ತರಣೆ ಬದಲು ಸಂಪುಟ ಪುನಾರಚನೆಗೆ ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ. ಈ ಸಂಬಂಧ ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಇನ್ನು ಎರಡ್ಮೂರು ದಿನಗಳಲ್ಲಿ ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸಂಪುಟ ವಿಸ್ತರಣೆಗೆ ಏನು ಸಮಸ್ಯೆ ಇಲ್ಲ. ಮೂರು ದಿನದಲ್ಲಿ ದೆಹಲಿಗೆ ಹೊರಡುತ್ತಿದ್ದು, ಅಲ್ಲಿಂದ ಬಂದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು. ಭಾನುವಾರ ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಿದರು. ದೆಹಲಿಗೆ ಬನ್ನಿ ಎಂದು ಬುಲಾವ್ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು 10 ದಿನಗಳ ಅವಧಿಯಲ್ಲಿ ಎರಡನೇ ಬಾರಿಗೆ ದೆಹಲಿ ಯಾತ್ರೆ ಕೈಗೊಳ್ಳುತ್ತಿದ್ದಾರೆ.

ಅಕ್ಟೋಬರ್ 6ರಂದು ಬಿಎಸ್‍ವೈ ಸಂಪುಟ ಪುನಾರಚನೆ ನಡೆಯೋ ಸಾಧ್ಯತೆಗಳು ಹೆಚ್ಚಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹುದ್ದೆಗೆ ಏರಿದ ಸಚಿವ ಸಿಟಿ ರವಿ, ನಾಲ್ಕೈದು ದಿನದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನು ಹೊಸ ಹೈಕಮಾಂಡ್ ಸೂತ್ರ: ಸದ್ಯ ಆರು ಸಚಿವ ಸ್ಥಾನ ಖಾಲಿ ಇದ್ದು, ನಾಲ್ವರಿಂದ ರಾಜೀನಾಮೆ ಕೊಟ್ಟರೆ ಒಟ್ಟು 10 ಸಚಿವ ಸ್ಥಾನ ಖಾಲಿ ಆಗಲಿದೆ. 10ರ ಪೈಕಿ 2 ಸ್ಥಾನಗಳನ್ನು ಉಳಿಸಿಕೊಂಡು 8 ಸ್ಥಾನ ತುಂಬಲು (ಫಾರ್ಮುಲಾ 2+6 ಅನ್ವಯ) ಹೈಕಮಾಂಡ್ ಪ್ಲಾನ್ ಮಾಡಿದೆ ಎನ್ನಲಾಗಿದೆ.

ಸಚಿವರಾದ ಸಿಟಿ ರವಿ, ಶಶಿಕಲಾ ಜೊಲ್ಲೆ, ಸಿಸಿ ಪಾಟೀಲ್ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಕೈ ಬಿಟ್ಟು, ಇಬ್ಬರು ವಲಸಿಗರು ಮತ್ತು ಆರು ಮಂದಿ ಮೂಲ ಬಿಜೆಪಿಗರಿಗೆ ಮಂತ್ರಿಗಿರಿ ಸಂಪುಟದಲ್ಲಿ ಸಿಗುವ ಸಾಧ್ಯತೆಗಳಿವೆ.

ಎಂ.ಟಿ.ಬಿ ನಾಗರಾಜ್ ಮತ್ತು ಆರ್. ಶಂಕರ್‍ಗೆ ಸಚಿವ ಸ್ಥಾನ ಬಹುತೇಕ ಫಿಕ್ಸ್ ಎಂದು ಹೇಳಲಾಗ್ತಿದೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಸ್ ಅಂಗಾರ, ಸುನೀಲ್ ಕುಮಾರ್ ಅಥವಾ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಬಹುದು. ಈ ನಡುವೆ ಎರಡು ಅಚ್ಚರಿಯ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಪ್ಲಾನ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *