ಬಿಜೆಪಿ ಸರ್ಕಾರಕ್ಕೆ ಭವಿಷ್ಯವಿಲ್ಲ, ಆರು ತಿಂಗಳಲ್ಲಿ ಪತನವಾಗಲಿದೆ: ಎಂಎಲ್‍ಸಿ ಗೋಪಾಲಸ್ವಾಮಿ

ಹಾಸನ: ರೈತರು, ಕಾರ್ಮಿಕರ ವಿರೋಧ ಕಟ್ಟಿಕೊಂಡರೆ ಈ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಕಿಡಿಕಾರಿದ್ದಾರೆ.

ರೈತ ವಿರೋಧಿ ನಡೆ ಖಂಡಿಸಿ ಸರ್ಕಾರದ ವಿರುದ್ಧ ಹಾಸನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ರೈತ ವಿರೋಧಿ ಕಾಯ್ದೆ ವಿರುದ್ಧ ನಡೆಸುತ್ತಿರುವ ಬಂದ್‍ಗೆ ನಮ್ಮ ಬೆಂಬಲವಿದೆ. ಈಗಾಗಲೇ ಯಡಿಯೂರಪ್ಪ ಅವರನ್ನು ಕೆಳಗಿಸಲು ಅವರ ಪಕ್ಷದಲ್ಲೇ ಒಂದು ಸಂಘಟನೆ ಇದ್ದು, ಸರ್ಕಾರ ಬೀಳಿಸಲು ಬಿಜೆಪಿಯವರೇ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಮ್ಮ ಪಕ್ಷದಿಂದ ಬಿಜೆಪಿಗೆ ಹೋದವರು ಈ ಕಾಯ್ದೆ ವಿರೋಧಿಸಿ. ದಯವಿಟ್ಟು ನಮ್ಮ ಪಕ್ಷಕ್ಕೆ ಮರಳಿ ಬನ್ನಿ. ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲ. ಇನ್ನು ಕೇವಲ ಆರು ತಿಂಗಳಲ್ಲಿ ಈ ಸರ್ಕಾರ ಪತನವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ಮಸೂದೆ ಖಂಡಿಸಿ ನಡೆಸುತ್ತಿರುವ ಬಂದ್‍ಗೆ ಹಾಸನದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಲಾಗುತ್ತಿದೆ.

ಕೃಷಿ ಮಸೂದೆ ಖಂಡಿಸಿ ರಾಜ್ಯಾದ್ಯಂತ ಕರೆ ನೀಡಿರುವ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರೆ, ಇನ್ನೂ ಹಲವೆಡೆ ಅಂಗಡಿ ಮುಂಗಟ್ಟಿಗಳನ್ನು ತೆರೆಯಲಾಗಿದ್ದು, ಬಸ್ ಸಂಚಾರ ಸಹ ಎಂದಿನಂತೆ ಇದೆ. ಹೀಗೆ ಬಂದ್‍ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ ಸಂಘಟನೆ ಕಾರ್ಯಕರ್ತರು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *