ಅಣ್ಣನಿಗೆ ಏನೂ ಆಗಿಲ್ಲ: ಶರಣ್ ಆನಾರೋಗ್ಯದ ಬಗ್ಗೆ ಶೃತಿ ಪ್ರತಿಕ್ರಿಯೆ

-ಆರೋಗ್ಯ ಸುಧಾರಣೆ ಬಳಿಕ ಶೂಟಿಂಗ್

ಬೆಂಗಳೂರು: ಸೋದರ ಶರಣ್ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಏನು ಆಗಿಲ್ಲ ಎಂದು ಹಿರಿಯ ನಟಿ ಶೃತಿ ಮಾಹಿತಿ ನೀಡಿದ್ದಾರೆ.

ಅವತಾರ ಪುರುಷ ಸಿನಿಮಾ ಶೂಟಿಂಗ್ ವೇಳೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಶರಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶರಣ್ ಆರೋಗ್ಯದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶೃತಿ, ಅಣ್ಣನಿಗೆ ದೊಡ್ಡ ಸಮಸ್ಯೆ ಏನು ಆಗಿಲ್ಲ. ಇಂದು ಅವತಾರ ಪುರುಷ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೊರೊನಾ ಮತ್ತು ಚಿತ್ರೀಕರಣಕ್ಕೆ ಸಮಸ್ಯೆಯಾಗುವ ಹಿನ್ನೆಲೆ ತಮ್ಮ ನೋವನ್ನು ಸೋದರ ಶರಣ್ ಯಾರ ಬಳಿಯೂ ಹೇಳಿ ಕೊಂಡಿರಲಿಲ್ಲ ಎಂದು ತಿಳಿಸಿದರು.

ಕಿಡ್ನಿಯಲ್ಲಿ ಸ್ಟೋನ್ ಇರೋದಾಗಿ ವೈದ್ಯರು ತಿಳಿಸಿದ್ದು, ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಇಂದು ಚಿಕಿತ್ಸೆ ಪಡೆದು ನಾಳೆ ಮನೆಗೆ ಬರಬಹುದು. ಇಂದು ತಮ್ಮಿಂದಾಗಿ ಶೂಟಿಂಗ್ ಪೋಸ್ಟ್ ಪೋನ್ ಆಗಿದ್ದಕ್ಕೆ ಶರಣ್ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಶೃತಿ ಹೇಳಿದರು.

ಒಂದು ವಾರದಿಂದ ಅವತಾರ ಪುರುಷ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇಂದು ಸದಾ ಲವಲವಿಕೆಯಿಂದ ಇರೋ ಶರಣ್ ಸರ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಶೂಟಿಂಗ್ ಸೆಟ್ ನಿಂದ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯ್ತು. ಶರಣ್ ಅವರು ಆದಷ್ಟು ಬೇಗ ಗುಣಮುಖರಾಗುತ್ತಾರೆ. ಆರೋಗ್ಯ ಸುಧಾರಿಸಿದ ಬಳಿಕ ಶರಣ್ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎಂದು ನಿರ್ದೇಶಕ ಸಿಂಪಲ್ ಸುನಿ ಮಾಹಿತಿ ನೀಡಿದ್ದಾರೆ.

ಹೆಚ್ ಎಂಟಿ ಗ್ರೌಂಡ್ ನಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಶರಣ್ ಅವರಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ನಿರ್ದೇಶಕ ಸಿಂಪಲ್ ಸುನಿ ನತ್ತು ನಿರ್ಮಾಪಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಚಿತ್ರದಲ್ಲಿ ಶರಣ್ ಗೆ ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ಸಿಂಪಲ್ ಸುನಿ ಆ್ಯಕ್ಷನ್ ಕಟ್ ಹೇಳಿದ್ದು, ಕೋವಿಡ್ 19 ಪರಿಣಾಮ ಇದರ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಸರ್ಕಾರ ಮಾರ್ಗ ಸೂಚಿ ಅನ್ವಯ ಚಿತ್ರತಂಡ ಕೊನೆಯ ಹಂತದ ಶೂಟಿಂಗ್ ನಲ್ಲಿ ತೊಡಗಿಕೊಂಡಿತ್ತು.

Comments

Leave a Reply

Your email address will not be published. Required fields are marked *